ʼನಮ್ಮ ಮೆಟ್ರೊʼಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಸಚಿವ ಎಂ.ಬಿ.ಪಾಟೀಲ್

Update: 2023-10-27 18:02 GMT

ಬೆಂಗಳೂರು, ಅ.27: ಅನುಭವ ಮಂಟಪದ ರೂವಾರಿ ಬಸವೇಶ್ವರರ ಹೆಸರನ್ನು ‘ನಮ್ಮ ಮೆಟ್ರೊ'ಗೆ ಇಡುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೊಗೆ ಬಸವೇಶ್ವರರ ಹೆಸರು ಇಡಬೇಕು ಎನ್ನುವ ಬೇಡಿಕೆ ಇದೆ. ಕೇವಲ ಯಾವುದೊ ಒಂದು ನಿಲ್ದಾಣಕ್ಕೆ ಹೆಸರು ಇಡುವ ಬದಲು ಇಡೀ ಮೆಟ್ರೊ ವ್ಯವಸ್ಥೆಗೇ ಬಸವೇಶ್ವರರ ಹೆಸರು ಇಡುವುದು ಸೂಕ್ತ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟ ಹಾಗೆ ಮೆಟ್ರೊಗೂ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ಮಾಡಲಾಗುವುದು ಎಂದರು.

ಅಂತೆಯೇ, ಬಿಜಾಪುರ ಹೋಗಿ ವಿಜಯಪುರ ಆಗಿರುವ ಜಿಲ್ಲೆಗೆ "ಬಸವೇಶ್ವರ ಜಿಲ್ಲೆ" ಎಂದು ನಾಮಕರಣ ಮಾಡಬೇಕೆಂಬ ಧ್ವನಿಯೂ ಕೇಳಿಬಂದಿದೆ. ಯಾವುದಕ್ಕೇ ಆಗಲಿ ಬಸವೇಶ್ವರರ ಹೆಸರನ್ನು ಇಡುವುದಕ್ಕೆ ನಮ್ಮ ಯಾರ ವಿರೋಧವೂ ಇಲ್ಲ. ವೈಯಕ್ತಿಕವಾಗಿ ನಾನಂತೂ ಬಸವಣ್ಣನವರ ಅಪ್ಪಟ ಅನುಯಾಯಿ. ಆದರೆ, ಹೆಸರು ಬದಲಾವಣೆ ಮಾಡುವುದಕ್ಕೆ ಮುಂಚೆ ಇತರ ಹತ್ತು ಹಲವು ಸಾಧಕ ಬಾಧಕಗಳ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಪಾಟೀಲ ಅವರು ವಿವರಿಸಿದರು.

ಕರ್ನಾಟಕ ರಾಜ್ಯದ ಹೆಸರನ್ನು "ಬಸವೇಶ್ವರ ನಾಡು" ಎಂದು ಬದಲಾಯಿಸುವ ಪ್ರಸ್ತಾವ ಇದೆಯೇ ಎಂದು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅಂತಹ ಪ್ರಸ್ತಾಪದ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಅವರನ್ನು ಆ ರಾಜ್ಯದ ಸಾಂಸ್ಕøತಿಕ ಪ್ರತೀಕ ಎಂದು ಪರಿಗಣಿಸಿರುವ ರೀತಿಯಲ್ಲೇ ನಮ್ಮ ರಾಜ್ಯದಲ್ಲಿ ಬಸವೇಶ್ವರ ಅವರನ್ನು ಸಾಂಸ್ಕøತಿಕ ಪ್ರತೀಕವಾಗಿ ಪರಿಗಣಿಸಬೇಕು ಎಂಬ ಬೇಡಿಕೆಗಳು ಇವೆ" ಎಂದರು.

ಒಂದು ಹೆಸರನ್ನು ಬದಲಾಯಿಸಿದರೆ ಅದು ಸ್ಥಳೀಯ ಮಟ್ಟದಿಂದ ಹಿಡಿದು ಅಂತರ್‍ರಾಷ್ಟ್ರೀಯ ಮಟ್ಟದವರೆಗೆ ಬದಲಾವಣೆ ಆಗಬೇಕಾಗುತ್ತದೆ. ಹೀಗಾದಾಗ ಕೆಲವು ತೊಡಕುಗಳು ಕೂಡ ಉಂಟಾಗುತ್ತವೆ. ಬಿಜಾಪುರ ಎಂಬ ಹೆಸರನ್ನು ವಿಜಯಪುರ ಎಂದು ಬದಲಾಯಿಸಿದಾಗ ಕೂಡ ಸಾಕಷ್ಟು ಅಡಚಣೆಗಳು ಎದುರಾಗಿದ್ದವು. ಈಗಷೇ ಅವೆಲ್ಲಾ ಒಂದು ಹಂತಕ್ಕೆ ಬಂದಿವೆ. ಅಲ್ಪಾವಧಿಯಲ್ಲಿ ಒಂದು ಸ್ಥಳದ ಹೆಸರನ್ನು ಎರಡನೇ ಸಲ ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News