ಡಿ.ಕೆ. ಸಹೋದರರನ್ನು ಟೀಕಿಸಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎಚ್‌ಡಿಕೆ, ಯೋಗೇಶ್ವರ್ ಯತ್ನ: ರಮೇಶ್ ಬಾಬು

Update: 2023-10-06 15:04 GMT

ಬೆಂಗಳೂರು, ಅ.6: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮರಿ ಖರ್ಗೆ ಎಂದಿರುವ ಬಿಜೆಪಿ ನಾಯಕ ಸಿ.ಟಿ.ರವಿ ಅವರನ್ನು ಚಡ್ಡಿ ಎಂದರೇ ತಪ್ಪಿಲ್ಲ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಟೀಕಿಸಿದ್ದಾರೆ.

ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸಿ.ಟಿ.ರವಿ ಮಾತನಾಡುವಾಗ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿದ್ದಾರೆ. ಕೋಮು ಸೌಹಾರ್ಧತೆಗೆ ಯಾರೇ ಧಕ್ಕೆ ತಂದರು ಅವರ ಬಾಲ ಕತ್ತರಿಸುವುದಾಗಿ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದರು. ಸರಕಾರದ ಒಂದು ಭಾಗವಾಗಿ ಈ ಮಾತನ್ನು ಹೇಳಿದ್ದರು.ಆದರೆ, ಸಿ.ಟಿ.ರವಿ ಅವರು ಬಳಸಿದ ಮರಿ ಖರ್ಗೆ ಪದ ಅತ್ಯಂತ ಕೀಳು ಅಭಿರುಚಿ. ಇಂತಹ ಹೇಳಿಕೆಯನ್ನು ಕಪಿಚೇಷ್ಠೆ ಎಂದು ಕರೆಯಬಹುದು ಎಂದು ಹೇಳಿದರು.

ಕೀಳು ಮಟ್ಟದ ಭಾಷೆಯನ್ನು ಬಿಟ್ಟು ಚರ್ಚೆ ಮಾಡಿದರೆ ಕಾಂಗ್ರೆಸ್ ಪಕ್ಷ ಸದಾ ಸಿದ್ದವಿರುತ್ತದೆ. ಚರ್ಚೆ ಮಾಡಿದಾಗ ಮಾತ್ರ ಒಂದು ಆಲೋಚನೆ ಹುಟ್ಟಲು ಸಾಧ್ಯ. ಮುಂದಾದರು ಕಪಿಚೇಷ್ಟಿಯ ಮಾತುಗಳನ್ನು ಬಿಟ್ಟು, ಕುವೆಂಪು ಅವರ ಆಶಕಯದಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಬಾಳಿ ಎಂದು ಸಿ.ಟಿ.ರವಿ ಹಾಗೂ ಬಿಜೆಪಿ ನಾಯಕರಿಗೆ ಸಲಹೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಆದ ಕಾರಣಕ್ಕೆ ತನ್ನ ಪಕ್ಷದ ಅನೇಕ ಹಿರಿಯ ನಾಯಕರಿಗೆ ವಿಶ್ರಾಂತಿ ನೀಡುವುದರ ಮೂಲಕ ಹೈಕಮಾಂಡ್ ಮನೆಗೆ ಕಳುಹಿಸಿದೆ. ಮತ್ತೊಂದೆಡೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರತ್ನಗಂಬಳಿ ಸ್ವಾಗತ ನೀಡಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರುಗಳಿಗೆ ವಿಶ್ರಾಂತಿಯ ಸೂಚನೆ ನೀಡಿದೆ ಎಂದು ಆರೋಪಿಸಿದರು.

ʼʼರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯತ್ನʼʼ

ಅಭೂತಪೂರ್ವ ಜೋಡಿಗಳಾಗಿ ಕುಮಾರಸ್ವಾಮಿ ಅವರು ಮತ್ತು ಸಿ.ಪಿ.ಯೋಗಿಶ್ವರ್ ಇಬ್ಬರೂ ಸೇರಿಕೊಂಡು ಕೀಳು ಹಾಗೂ ವೈಯಕ್ತಿಕ ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಅನಿವಾರ್ಯತೆ ಈ ಇಬ್ಬರಿಗೂ ಹೆಚ್ಚಾಗಿ ಕಾಡುತ್ತಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಟೀಕೆ ಮಾಡಿದರೆ ಮಾತ್ರ ತಮ್ಮ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದು ನಂಬಿದ್ದಾರೆ. ಯೋಗೇಶ್ವರ್ ಅವರು ಬಿಜೆಪಿಯಿಂದ ಒಂದು ಸಲ ಗೆಲುವು ಸಾಧಿಸಿದ್ದು ಬಿಟ್ಟರೆ ಕಳೆದ 15 ವರ್ಷಗಳಲ್ಲಿ ಗೆಲುವು ಅನ್ನುವುದನ್ನೇ ಕಂಡಿಲ್ಲ ಎಂದರು. 

ಇನ್ನೊಂದೆಡೆ, ಕುಮಾರಸ್ವಾಮಿ ಅವರು ತಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ, ಚನ್ನಪಟ್ಟಣವನ್ನು ಉಳಿಸಿಕೊಳ್ಳುವ ಸಲುವಾಗಿ ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕಿಂತ ಮುಂಚೆ, ಪರಸ್ಪರ ಅವಹೇಳನ ಮಾಡಿಕೊಂಡು ರಾಮನಗರದಲ್ಲಿ ಕೆಟ್ಟ ಸಂಸ್ಕøತಿಯನ್ನು ಹುಟ್ಟು ಹಾಕಿದವರು, ಈಗ ಅಭೂತಪೂರ್ವ ಜೋಡಿಗಳಾಗಿ ಪಕ್ಷ ಕಟ್ಟುತ್ತಾರೆ ಎಂದರೆ ಕಟ್ಟಲಿ ಇದೊಂದು ಸಂತಸದ ವಿಚಾರ.

ಆದರೆ ಪದೇ, ಪದೇ ಡಿ.ಕೆ.ಸಹೋದರರನ್ನು ವಿನಾಕಾರಣ ಟೀಕೆ ಮಾಡುತ್ತಾ, ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News