ಬಿಜೆಪಿಯವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ : ಡಿ.ಕೆ.ಶಿವಕುಮಾರ್‌

Update: 2024-08-20 06:54 GMT

.

ಬೆಂಗಳೂರು : ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಶೇಷಾದ್ರಿಪುರ ಜಂಕ್ಷನ್ ಬಳಿ ರಾಜೀವ್ ಗಾಂಧಿ ಅವರ ಪ್ರತಿಮೆಗೆ ಮಂಗಳವಾರ ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ಅನಂತರ ಈ ಬಗ್ಗೆ ಮಾತನಾಡುತ್ತೇನೆ" ಎಂದು ತಿಳಿಸಿದರು.

ಬಿಬಿಎಂಪಿಯಿಂದ ಪ್ರತಿ ವರ್ಷ ರಾಜೀವ್ ಗಾಂಧಿ ಜನ್ಮ ದಿನಾಚರಣೆ :

"ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಪೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು" ಎಂದರು.

"ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ. ದಿನೇಶ್ ಗುಂಡೂರಾವ್ ಅವರ ಇಚ್ಛೆಯಂತೆ, ಅವರ ಕ್ಷೇತ್ರ ವ್ಯಾಪ್ತಿಯ ಶೇಷಾದ್ರಿಪುರಂ ಸಿಗ್ನಲ್ ಮುಕ್ತ ಜಂಕ್ಷನ್ ಗೆ ರಾಜೀವ್ ಗಾಂಧಿ ಹೆಸರಿಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು" ಎಂದರು.

"18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ತಿದ್ದುಪಡಿ, ಐಟಿ ಬಿಟಿ ಬೆಳವಣಿಗೆಗೂ ಇವರೇ ಕಾರಣ. ಇಂದು ಎಲ್ಲರ ಬಳಿ ಎರಡೆರಡು ಮೊಬೈಲ್ ಗಳಿವೆ. ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಟಿಯ ಟೆಲಿಫೋನ್ ಕ್ರಾಂತಿ ಕಾರಣ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News