ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ | ಕೋರ್ಟ್‌ ಏನೇ ತೀರ್ಪು ನೀಡಿದರೂ ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ : ಡಿಕೆಶಿ

Update: 2024-08-29 06:47 GMT

ಎತ್ತಿನಹೊಳೆ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್ (PC:x/@DKShivakumar)

ಸಕಲೇಶಪುರ‌ : ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ನ್ಯಾಯಾಲಯ ಏನೇ ತೀರ್ಪು ನೀಡಿದರೂ ನಾನು ಅದನ್ನು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಪ್ರಕರಣದ ಕುರಿತ ತೀರ್ಪಿನ ಬಗ್ಗೆ ಕೇಳಿದಾಗ "ನನಗೆ ದೇವರ ಮೇಲೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇದೆ" ಎಂದರು.

ಎತ್ತಿನಹೊಳೆ ಕಾಮಗಾರಿ ವೀಕ್ಷಣೆ ನಂತರ ಸಕಲೇಶಪುರದ ಹೆಬ್ಬನಹಳ್ಳಿ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಮೇಲೆ ದೂರು ದಾಖಲಾಗಿರುವ ಬಗ್ಗೆ ಕೇಳಿದಾಗ " ಸಿಎಂ ಏನು ಮಾಡಿದ್ದಾರೆ ಎಂದು ಅವರ ಮೇಲೆ ಎಲ್ಲಾ ಏಕೆ ಮುಗಿಬೀಳುತ್ತಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಏನು ಆಗುವುದಿಲ್ಲ. ಜಮೀನು ಕಳೆದುಕೊಂಡಿರುವುದಕ್ಕೆ ಪರಿಹಾರವಾಗಿ ಬಿಜೆಪಿಯವರೇ ನಿವೇಶನ ನೀಡಿದ್ದಾರೆ. ಸಿಎಂ ಅವರು ಎಲ್ಲೂ ಪ್ರಭಾವವನ್ನು ಬೀರಿಲ್ಲ, ಸಹಿಯನ್ನು ಮಾಡಿಲ್ಲ" ಎಂದರು.

75 ಲಕ್ಷ ಜನರಿಗೆ ಎತ್ತಿನಹೊಳೆ ಯೋಜನೆಯಿಂದ ಅನುಕೂಲ :

"ಬುಧವಾರ ಸಂಜೆ ಎತ್ತಿನಹೊಳೆ ಏತ ನೀರಾವರಿಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಈ ಯೋಜನೆಯಿಂದ ತುಮಕೂರು, ಚಿಕ್ಕಮಗಳೂರು ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರದ ಸ್ವಲ್ಪ ಭಾಗ ಸೇರಿದಂತೆ ಏಳು ಜಿಲ್ಲೆಗಳ 75 ಲಕ್ಷ ಜನರಿಗೆ ಉಪಯೋಗವಾಗುತ್ತದೆ. ಪ್ರಸ್ತುತ 550 ಕ್ಯೂಸೆಕ್ಸ್ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದರ ಆರು ಪಟ್ಟು ನೀರನ್ನು ಪಂಪ್ ಮಾಡಲಾಗುವುದು. ಪ್ರಸ್ತುತ ಮೇಲೆತ್ತಿರುವ ನೀರನ್ನು ವಾಣಿವಿಲಾಸ (ಮಾರಿಕಣಿವೆ) ಸಾಗರಕ್ಕೆ ಹರಿಸಲಾಗುತ್ತಿದೆ. ಮಳೆಗಾಲ ಮುಗಿಯುವ ಹೊತ್ತಿಗೆ ಒಂದಷ್ಟು ನೀರನ್ನು ಎತ್ತಬೇಕಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತದೆ ಎನ್ನುವುದಕ್ಕೆ ಈ ಯೋಜನೆ ಸಾಕ್ಷಿ" ಎಂದರು.

"ನಮ್ಮ ಸರ್ಕಾರದ ಮಹತ್ವಕಾಂಕ್ಷಿಯ ಕಾರ್ಯಕ್ರಮ ಇದಾಗಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲಾ ಜಿಲ್ಲೆಯ ಶಾಸಕರನ್ನು ಜನಪ್ರತಿನಿಧಿಗಳನ್ನು ಕರೆದು ಉದ್ಘಾಟನೆ ಮಾಡಲಾಗುವುದು. ಸಾವಿರಾರು ಜನರು ಬಂದು ವೀಕ್ಷಣೆ ಮಾಡುವಂತೆ ಉದ್ಘಾಟನಾ ಕಾರ್ಯಕ್ರಮ ರೂಪಿಸಲಾಗುವುದು. ಎಲ್ಲರೂ ಒಂದೇ ಕಡೆಗೆ ಬಂದು ಉದ್ಘಾಟನೆ ಮಾಡುವ ಬದಲು ಪ್ರಮುಖವಾದ ಸ್ಥಳಗಳಲ್ಲಿ ಚಾಲನೆ ನೀಡುವಂತೆ ಕಾರ್ಯಕ್ರಮ ಮಾಡಲಾಗುವುದು. ಈ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ಬಿತ್ತರಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಈ ಯೋಜನೆ ಬಗ್ಗೆ ಸಾಕಷ್ಟು ಜನ ಟೀಕೆ ಮಾಡಿದರು. ಆದರೆ ಇಂದು, ಟೀಕೆಗಳು ಸತ್ತಿವೆ ಕೆಲಸ ಮಾತ್ರ ಉಳಿದಿದೆ. ಈ ಯೋಜನೆಗೆ ಸಹಕಾರ ನೀಡಿದ ಎಲ್ಲಾ ಇಲಾಖೆ ಹಾಗೂ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News