ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಜಾ | ಕೋರ್ಟ್‍ನಲ್ಲಿ ನನಗೆ ನ್ಯಾಯ ಸಿಕ್ಕಿದೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ನಾನು ನಂಬಿದ್ದಂತೆ ನ್ಯಾಯಾಲಯದಲ್ಲಿ ನನಗೆ ನ್ಯಾಯ, ರಕ್ಷಣೆ ಸಿಕ್ಕಿದೆ. ಇದು ನನಗಿಂತ ಸರಕಾರ ಹಾಗೂ ರಾಜ್ಯದ ಜನರಿಗೆ ಸಿಕ್ಕ ಗೆಲುವು. ನನ್ನ ಪರವಾಗಿ ವಾದ ಮಾಡಿದವರಿಗೆ ಹಾಗೂ ಸರಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹೈಕೋರ್ಟ್ ವಜಾಗೊಳಿಸಿ ತೀರ್ಪು ಪ್ರಕಟಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಸರಕಾರದ ತೀರ್ಮಾನ ಸರಿ ಇದೆ ಎಂದು ಹೈಕೋರ್ಟ್ ತಿಳಿಸಿದೆ. ಸಿಬಿಐನವರು ಈ ವಿಚಾರ ಇಲ್ಲಿಗೆ ಬಿಟ್ಟರೂ ಬಿಡಬಹುದು. ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಬಿಜೆಪಿ ಸರಕಾರ ನನ್ನ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತಗೆ ನೀಡಿ ತನಿಖೆ ಮಾಡಿಸಬಹುದಿತ್ತು. ಆದರೆ ಯಡಿಯೂರಪ್ಪ ಸರಕಾರ ಈ ಪ್ರಕರಣ ಸಿಬಿಐಗೆ ನೀಡಿತ್ತು ಎಂದು ಶಿವಕುಮಾರ್ ತಿಳಿಸಿದರು.
ನನ್ನ ವಿರುದ್ಧ ಪಿಎಂಎಲ್‍ಎ ಪ್ರಕರಣ ದಾಖಲಿಸಿ ಜೈಲಿಗೂ ಕಳುಹಿಸಿದರು. ನಾನು ಅಂದೂ ಕೂಡ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೆ. ಇದೇ ಕೇಸಿನಲ್ಲಿ ಈ.ಡಿ ದಾಖಲಿಸಿದ್ದ ಪ್ರಕರಣವೂ ವಜಾಗೊಂಡಿತ್ತು. ನಾನು ತಪ್ಪು ಮಾಡಿಲ್ಲ ಎಂದು ಅಂದೂ ವಾದ ಮಾಡಿದ್ದೆ. ಇಂದು ಅದನ್ನೇ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.
ನಮ್ಮ ಮುಖ್ಯಮಂತ್ರಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸರಿಯಲ್ಲ. ಎಲ್ಲ ಪ್ರಕರಣಗಳಂತೆ ಈ ಪ್ರಕರಣವೂ ಲೋಕಾಯುಕ್ತದಲ್ಲಿ ತನಿಖೆಯಾಗಲಿ ಎಂದು ವರ್ಗಾವಣೆ ಮಾಡಿದರು. ಈಗ ಲೋಕಾಯುಕ್ತ ಸಂಸ್ಥೆ ತನಿಖೆ ಮಾಡುತ್ತಿದ್ದು, ನನಗೆ ಸಮನ್ಸ್ ಮಾಡಿ ವಿಚಾರಣೆ ನಡೆಸಿದ್ದಾರೆ. ನಾನು ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಈ ಮಧ್ಯೆ, ಸಿಬಿಐನವರು ಈ ಪ್ರಕರಣವನ್ನು ನಾವೇ ತನಿಖೆ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ. ಸಿಬಿಐ ಶೇ.90ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ್ದರು. ನನ್ನ ವಿಚಾರಣೆ ಮಾಡದೇ ಹೇಗೆ ಅರ್ಧ ವಿಚಾರಣೆ ಪೂರ್ಣಗೊಳಿಸಲು ಸಾಧ್ಯ? ಅವರು ಕೊಟ್ಟ ನೊಟೀಸ್ ಗೆ ದಾಖಲೆ ಒದಗಿಸಿದ್ದೆ. ಈ ಮಧ್ಯೆ ಮತ್ತೊಬ್ಬ ನಾಯಕ ಈ ವಿಚಾರದಲ್ಲಿ ಅರ್ಜಿ ಹಾಕಿದ್ದರು. ಅವರು ನನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದೇನೆ ಎಂದು ಅವರು ಹೇಳಿದರು.
ಯತ್ನಾಳ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ?: ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅದಕ್ಕೆ ನಾನು ಬೇಡ ಎನ್ನುವುದಿಲ್ಲ. ಯತ್ನಾಳ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ. ನನ್ನ ಪ್ರಕಾರ ಸಿಬಿಐಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಸಿಬಿಐ ಕೂಡ ಪೊಲೀಸ್ ಠಾಣೆ ಇದ್ದಂತೆ. ಸಿಬಿಐ ಸರಕಾರ ಅಲ್ಲ. ಇದು ಸರಕಾರಗಳ ವಿಚಾರ ಎಂದು ತಿಳಿಸಿದರು.