‘ಬೆಂಗಳೂರು ದಕ್ಷಿಣ ಜಿಲ್ಲೆ’ ಹೆಸರು ಬದಲಾವಣೆಯಿಂದ ಉದ್ಯೋಗ ಸೃಷ್ಟಿ ಹೆಚ್ಚಳ : ಡಿ.ಕೆ.ಶಿವಕುಮಾರ್

Update: 2024-08-30 15:26 GMT

PC : x/@DKShivakumar

ಚನ್ನಪಟ್ಟಣ : ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದ ಕಾರಣಕ್ಕೆ ಯುವ ಪೀಳಿಗೆಗೆ ಉದ್ಯೋಗ ಹಾಗೂ ಜೀವನ ಕಟ್ಟಿಕೊಳ್ಳಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಶುಕ್ರವಾರ ಚನ್ನಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಹೆಸರು ಈ ಜಿಲ್ಲೆಗೆ ಏಕೆ ಬೇಕು ಎಂದು ಒಂದಷ್ಟು ಜನ ಪ್ರಶ್ನೆ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗುವುದು ಬೇಕಿಲ್ಲವೆ. ಉದ್ಯೋಗ ಸೃಷ್ಟಿ ಮಾಡುವುದೇ ಕಾಂಗ್ರೆಸ್ ಸರಕಾರದ ಗುರಿ ಎಂದು ಹೇಳಿದರು.

ನಾವು ಉದ್ಯೋಗ ಮೇಳಕ್ಕೆ ಬಂದಿರುವ ಎಲ್ಲರಿಗೂ ಕೆಲಸ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ಆದರೆ ಯಾವ ಮಾರ್ಗದಲ್ಲಿ ನಡೆದರೆ ಯಶಸ್ಸು ಸಿಗುತ್ತದೆ ಎಂದು ದಾರಿ ಮಾಡಿಕೊಡುತ್ತೇವೆ. ನಾನು ಅನೇಕ ಹೆಣ್ಣು ಮಕ್ಕಳನ್ನು ಮಾತನಾಡಿಸಿಕೊಂಡು ಬಂದೆ. ಅನೇಕರಲ್ಲಿ ದುಡಿಯಬೇಕು ಎನ್ನುವ ಹಸಿವು ಹೆಚ್ಚಿದೆ. ನನಗೆ ಅನೇಕರ ಪರಿಸ್ಥಿತಿ ನೋಡಿ ಸಂಕಟ ಉಂಟಾಯಿತು ಎಂದು ಅವರು ತಿಳಿಸಿದರು.

ನಮ್ಮ ಊರಿನ ಪಕ್ಕದ ಲಂಬಾಣಿ ತಾಂಡದ ಹೆಣ್ಣು ಮಗಳು ಬಂದಿದ್ದು ನೋಡಿ ಸಂತೋಷವಾಯಿತು. ಜೀವಶಾಸ್ತ್ರ ಓದಿರುವ ವಿದ್ಯಾರ್ಥಿನಿಯನ್ನು ಒಂದು ಕಂಪೆನಿಯವರು ಸಂದರ್ಶನ ಮಾಡುತ್ತಿದ್ದರು. ಕೊನೆಗೆ 20 ಸಾವಿರ ರೂ. ಸಂಬಳ ಕೊಡುತ್ತೇವೆ ಎಂದು ಹೇಳಿದರು. ಆಗ ಆ ಹೆಣ್ಣು ಮಗಳು ನನಗೆ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ ಅದನ್ನು ಮಾಡಿ ಎಂದಾಗ ನನಗೆ ಹೊಟ್ಟೆಯಲ್ಲಿ ಸಂಕಟವಾಯಿತು. ಈ ಸಮಸ್ಯೆಗಳ ನಿವಾರಣೆಗೆ ಸರಕಾರ ಮುಂದಾಗಲಿದೆ ಎಂದು ಉಪ ಮುಖ್ಯಮಂತ್ರಿ ಭರವಸೆ ನೀಡಿದರು.

ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ: ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಕಾರಣಕ್ಕೆ ಆಯಾ ಜಿಲ್ಲೆಗಳಲ್ಲೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಅನೇಕ ಮಂತ್ರಿಗಳು ಅವರ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ನೆರವಾಗಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬಿಡದಿಯ ಟೊಯೋಟಾ ಕಂಪೆನಿಯವರು ತಮ್ಮ ಸಿಎಸ್‍ಆರ್ ಅನುದಾನದಲ್ಲಿ ಜಿಲ್ಲೆಯ ಸಾಕಷ್ಟು ಕಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟುತ್ತಿದ್ದಾರೆ. ಸರಕಾರವು ಇದಕ್ಕೆ ಸಹಕಾರ ನೀಡುತ್ತಿದೆ. ಈ ರೀತಿಯಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ನಾವು ಪಣ ತೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಸಂಪುಟ ಸಹೋದ್ಯೋಗಿಯಾದ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲರು ಯುವಜನರ ಜೊತೆ ಒಡನಾಟ ಇಟ್ಟುಕೊಳ್ಳುವ ಖಾತೆಯೆ ಬೇಕು ಎಂದು ಕೇಳಿ ಪಡೆದು ಉತ್ತಮ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಮೇಳದಲ್ಲಿ ನೂರು, ಸಾವಿರ ಅಥವಾ ಒಬ್ಬರಿಗೆ ಕೆಲಸ ಸಿಗಬಹುದು. ಆದರೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಿರಿ: ಸುಮಾರು 6 ಸಾವಿರ ಉದ್ಯೋಗಾಕಾಂಕ್ಷಿಗಳು ಸೇರಿದ್ದಾರೆ. ನೀವು ಇಲ್ಲಿಗೆ ಅವಕಾಶ ಹುಡುಕಿಕೊಂಡು ಬಂದಿದ್ದೀರಿ. ಮುಂದೊಂದು ದಿನ ಅವಕಾಶಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆ ಮಟ್ಟಕ್ಕೆ ನೀವು ಬೆಳೆಯಬೇಕು. ನೀವೇ ನಾಲ್ಕು ಜನಕ್ಕೆ ಉದ್ಯೋಗ ಕೊಡುವ ಮಟ್ಟಕ್ಕೆ ಬೆಳೆಯಬೇಕು. ಕೆಲಸ ಸಿಗಲಿಲ್ಲ ಅಂದರೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಒಂದಲ್ಲ ಒಂದು ದಿನ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಅವರು ತಿಳಿಸಿದರು.

ಸರಕಾರ ಅನೇಕ ನಿಗಮಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜನ ಕೊಡುತ್ತಿದೆ. ಸಾಲ ಸೌಲಭ್ಯದ ಅವಕಾಶವಿದೆ. ಇದರ ಸದುಪಯೋಗವನ್ನು ನೀವೆಲ್ಲ ಪಡೆದುಕೊಳ್ಳಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪದವೀಧರರು ಇದ್ದಿದ್ದೆ ಚನ್ನಪಟ್ಟಣ ತಾಲೂಕಿನಲ್ಲಿ ಎನ್ನುವ ಹೆಸರಿತ್ತು. ಈ ರಾಜ್ಯದ ಮೊದಲ ಶಿಕ್ಷಣ ಮಂತ್ರಿ ವೆಂಕಟಗಿರಿ ಗೌಡರು ಇದೇ ತಾಲೂಕಿನವರು. ವಿದ್ಯಾವಂತರ, ಸುಶಿಕ್ಷಿತರ ನಾಡು ಚನ್ನಪಟ್ಟಣ ಎಂದು ಅವರು ಹೇಳಿದರು.

ಪಕ್ಷಭೇದ ಮರೆತು ಅವಕಾಶಗಳನ್ನು ಬಳಸಿಕೊಳ್ಳಿ: ಚನ್ನಪಟ್ಟಣದ ಪ್ರತಿ ಹಳ್ಳಿಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಮುಖ್ಯಮಂತ್ರಿಗಳು ತಾಲೂಕಿನ ಅಭಿವೃದ್ಧಿಗೆ 150 ಕೋಟಿ ರೂ. ವಿಶೇಷ ಅನುದಾನ ಕೊಟ್ಟಿದಾರೆ. ವಸತಿ ಸಚಿವರು 5 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ. ನಿವೇಶನಗಳನ್ನು ಹಂಚಲು ಅನೇಕ ಕಡೆ ಜಾಗಗಳನ್ನು ಪರಿಶೀಲನೆ ಮಾಡಲಾಗಿದೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣದ ಜನತೆಯ ಕೈಬಿಡುವುದಿಲ್ಲ. ಪಕ್ಷ ಭೇದ ಮರೆತು ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News