ಎತ್ತಿನಹೊಳೆ 2027ಕ್ಕೆ ಪೂರ್ಣ, ಸೆ.6ಕ್ಕೆ ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ : ಡಿ.ಕೆ.ಶಿವಕುಮಾರ್

Update: 2024-09-02 13:44 GMT

ಬೆಂಗಳೂರು : ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣಗೊಳ್ಳಲಿದ್ದು, ಮೊದಲ ಹಂತದ ಕಾಮಗಾರಿಗಳನ್ನು ಸೆ.6ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ. ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಅರಣ್ಯ ಭೂಮಿ ತಕರಾರು ಬಗೆಹರಿಸಿ ಮುಂದಿನ 140 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿ, ತುಮಕೂರಿಗೆ ನೀರು ಹರಿಸಲಾಗುವುದು ಎಂದರು.

ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಿಂದ 32 ಕಿ.ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು ಎಂದು ಅವರು ಹೇಳಿದರು.

ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ಜನರಿಗೆ ಅನುಕೂಲವಾಗುವುದು. ಎಲ್ಲಾ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ತೊರೆ ಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿರುವುದಕ್ಕಿಂತ ಬೃಹತ್ ಪಂಪ್‍ಗಳನ್ನು ಎತ್ತಿನಹೊಳೆ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸೆ.6ರ ಶುಕ್ರವಾರದಂದು ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್‍ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಒಂದಷ್ಟು ಪ್ರಮುಖ ಭಾಗಗಳಲ್ಲಿ ಸಚಿವರುಗಳು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News