ಮೀಸಲಾತಿ ವಿಚಾರದಲ್ಲಿ ಯಾರೂ ಹೆದರುವ ಅಗತ್ಯವಿಲ್ಲ : ಡಿ.ಕೆ.ಶಿವಕುಮಾರ್

Update: 2024-10-14 13:31 GMT

ಸಂಡೂರು : ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಯಾರೂ ಹೆದರುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯಲಿದೆ. ಚಿತ್ರದುರ್ಗದಲ್ಲಿ ನಾವು ಘೋಷಿಸಿರುವುದನ್ನು, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಜಾರಿಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ಸಂಡೂರು ತಾಲೂಕಿನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಾರೆ. ನೀವು ಅದರಿಂದ ಮೋಸ ಹೋಗಬೇಡಿ ಎಂದು ಮನವಿ ಮಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲ ಜನಾಂಗದವರಿಗೂ ನ್ಯಾಯ ಒದಗಿಸಿಕೊಡುತ್ತೇವೆ. ನಿಮ್ಮ ಸೇವೆ ಮಾಡುವುದು ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯ ಅವರ ಸರಕಾರ ಮಾತ್ರ. ನೀವೆಲ್ಲರೂ ಸೇರಿ ಬಿಜೆಪಿಗೆ ದೊಡ್ಡ ಸಂದೇಶ ಕಳುಹಿಸಿದ್ದೀರಿ. ಹೀಗಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವೆಲ್ಲರೂ ಸಿದ್ದರಾಮಯ್ಯ ಸರಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಿದ್ದೀರಿ. ತುಕಾರಾಮ್ ಅವರಿಗೆ ಶಕ್ತಿ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಿದ್ದೀರಿ ಎಂದು ಶಿವಕುಮಾರ್ ಹೇಳಿದರು.

ಒಂದೂವರೆ ವರ್ಷದಲ್ಲಿ ಸಂಡೂರಿಗೆ 1200 ಕೋಟಿ ರೂ.ಅನುದಾನ: ಸಂಡೂರು ಕ್ಷೇತ್ರದ ಜನ ಸದಾ ನಮಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಒಂದೂವರೆ ವರ್ಷದಲ್ಲಿ 1200 ಕೋಟಿ ರೂ. ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಆಮೂಲಕ ಸಂಡೂರಿನ ಬಡ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ. ಅದರ ಭಾಗವಾಗಿ ಇಂದು ಹಲವು ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

200 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಇಲ್ಲಿರುವ ವಸತಿ ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ನಾನು ಪ್ರತಿನಿಧಿಸುವ ಕನಕಪುರದಲ್ಲಿಯೂ ಆಗಿಲ್ಲ. ಬದಲಿಗೆ ಸಂಡೂರಿನಲ್ಲಿ ಆಗಿವೆ. ಕಳೆದ ಒಂದೂವರೆ ವರ್ಷದಲ್ಲಿ ನಾನು ಕನಕಪುರಕ್ಕೆ ತೆಗೆದುಕೊಂಡು ಹೋಗಿರುವುದಕ್ಕಿಂತ ಹೆಚ್ಚಿನ ಅನುದಾನವನ್ನು ತುಕಾರಾಮ್ ಸಂಡೂರಿಗೆ ತಂದಿದ್ದಾರೆ. ಆಮೂಲಕ ಅವರು ನಿಮ್ಮ ಋಣ ತೀರಿಸುತ್ತಿದ್ದಾರೆ. 30 ಕೋಟಿ ರೂ.ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದು, ಕೊಟ್ಟ ಮಾತು ಉಳಿಸಿಕೊಂಡಿದೆ. ಈ ತಾಲೂಕಿನಲ್ಲಿ ಕೇವಲ 1,200 ಮನೆಗಳು ಮಾತ್ರ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಉಳಿದ ಎಲ್ಲ ಮನೆಗಳಿಗೆ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.

ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತಿದೆ. ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿಯ ಯಡಿಯೂರಪ್ಪ, ಬೊಮ್ಮಾಯಿ ನೀಡಿದ್ದಾರಾ? ಈ ಎಲ್ಲ ಕಾರ್ಯಕ್ರಮವನ್ನು ನಮ್ಮ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿಯವರು ಕೇವಲ ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಿನ್ನೆ ನಾವು ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ಹೋಗಿ, ನೂರಾರು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದ್ದೇವೆ. ನಾವು ಎಲ್ಲ ದೇವರು, ಧರ್ಮವನ್ನು ಗೌರವಿಸುತ್ತೇವೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಮಹಾತ್ಮ ಗಾಂಧಿಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳು ಪೂರೈಸಲಾಗಿದೆ. ಗಾಂಧಿಜಿ ಅವರು ಸಂಡೂರಿಗೂ ಆಗಮಿಸಿ ದಕ್ಷಿಣದ ಕಾಶ್ಮೀರ ಎಂದು ಹೇಳಿದ್ದರು. ನಾವು ಉಪಚುನಾವಣೆಗಾಗಿ ಬಂದಿಲ್ಲ. ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ಬಂದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ತುಕಾರಾಮ್ ಅವರ ಕೈ ಬಲಪಡಿಸಿ: ಉಪಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಸಿದ್ದರಾಮಯ್ಯ, ತುಕಾರಾಮ್ ಅವರ ಕೈ ಬಲಪಡಿಸುತ್ತೀರಿ ಎಂಬ ಆತ್ಮವಿಶ್ವಾಸ ನಮಗಿದೆ. ನೀವು ಸರಳ, ಸಜ್ಜನ, ಅಭಿವೃದ್ಧಿಗೆ ಹೆಸರಾದ ನನ್ನ ಸಹೋದರನನ್ನು ವಿಧಾನಸಭೆಗೂ ಕಳಿಸಿದ್ದೀರಿ, ಮಂತ್ರಿ ಮಾಡಿದ್ದೀರಿ, ಈಗ ಲೋಕಸಭೆಗೆ ಕಳುಹಿಸಿದ್ದೀರಿ. ಮುಂದೆ ಅವರೇ ಈ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಮುಂದಿನ ಕೆಲಸ ಮಾಡಲಿದ್ದಾರೆ. ಸರಕಾರದ ವಿವಿಧ ಕಾರ್ಯಕ್ರಮವನ್ನು ಅಖಂಡ ಬಳ್ಳಾರಿಗೆ ತಲುಪಿಸಿ ಶಕ್ತಿ ತುಂಬುತ್ತಿದ್ದಾರೆ ಎಂದು ಅವರು ತಿಳಿಸಿದರು.

…………..

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News