ಹುಬ್ಬಳ್ಳಿ ಪ್ರಕರಣ ಮಾತ್ರವಲ್ಲ, ರೈತರು, ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನೂ ವಾಪಸ್ ಪಡೆದಿದ್ದೇವೆ : ಜಿ.ಪರಮೇಶ್ವರ್

Update: 2024-10-14 09:25 GMT

ಬೆಂಗಳೂರು : "ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿಲ್ಲ. ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಕೈಗೊಂಡಿದ್ದ ಪ್ರತಿಭಟನೆಯ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಸ್ಪಷ್ಟಪಡಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕಾನೂನಿನ ಚೌಕಟ್ಟಿನಲ್ಲಿ ಹಿಂಪಡೆಯುವ ಪ್ರಕ್ರಿಯೆಯನ್ನು ಮಾಡಿದ್ದೇವೆ. ಕೋರ್ಟ್ ಒಪ್ಪಿದರೆ ವಾಪಸ್ ಆಗುತ್ತದೆ. ಇಲ್ಲವಾದರೆ ಕೇಸ್‌ಗಳು ಮುಂದುವರಿಯುತ್ತವೆʼ ಎಂದರು.

ನಮ್ಮ ಮುಂದೆ 56 ಕೇಸ್‌ಗಳು ಬಂದಿದ್ದವು. 43 ಕೇಸ್‌ಗಳನ್ನು ವಾಪಸ್‌ ಪಡೆದಿದ್ದೇವೆ. ಇದರಲ್ಲಿ ಬರೀ ಅಲ್ಪಸಂಖ್ಯಾತರಿಗೆ ಸೇರಿದ ಪ್ರಕರಣಗಳಿವೆಯೇ? ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತಿಭಟನೆ ಮಾಡಿರುವ ಪ್ರಕರಣಗಳಿವೆ. ಅವೆಲ್ಲಾ, ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿದ್ದರೆ ಅಥವಾ 43 ಪ್ರಕರಣಗಳು ಅಲ್ಪಸಂಖ್ಯಾತರಿಗೆ ಸೇರಿರುವ ಪ್ರಕರಣಗಳಾಗಿದ್ದರೆ ಬಿಜೆಪಿಯವರ ಆರೋಪವನ್ನು ಒಪ್ಪಿಕೊಳ್ಳಬಹುದಿತ್ತು. ಆ ರೀತಿ ಮಾಡಲು ಬರುವುದಿಲ್ಲ. ಎಲ್ಲವನ್ನು ಸಮಾನ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.

ಯಾವುದೇ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲು ಪ್ರಕ್ರಿಯೆ ಇದೆ. ಸುಳ್ಳು ಕೇಸ್ ದಾಖಲಿಸಿದ್ದಾರೆ, ಪೂರಕವಾದ ಸೆಕ್ಷನ್‌ಗಳನ್ನು ಹಾಕಿಲ್ಲ, ನಡೆದಿರುವ ಘಟನೆಯೇ ಬೇರೆ ಕೇಸ್ ದಾಖಲಿಸಿರುವುದೇ ಬೇರೆ ಎಂದು ಆರೋಪಿಸಿ ಮನವಿ ಕೊಟ್ಟಿರುತ್ತಾರೆ. ಇದನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿರುತ್ತಾರೆ. ಸಾಮಾನ್ಯವಾಗಿ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮಾಡಿರುತ್ತಾರೆ. ನಮಗೆ ಬರುವ ಮನವಿಗಳನ್ನು ಇಲಾಖೆಗೆ ಕಳುಹಿಸುತ್ತೇವೆ‌. ಅವರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಸಾಕ್ಷ್ಯ ಸಂಗ್ರಹಣೆಯಲ್ಲಿ ಆದ‌ ಲೋಪದೋಷಗಳನ್ನು ಪರಿಶೀಲಿಸಿ ಸಚಿವ ಸಂಪುಟ ಉಪಸಮಿತಿ ಮುಂದೆ ತರುತ್ತಾರೆ‌ ಎಂದರು.

ಸಂಪುಟ ಉಪ ಸಮಿತಿಯಲ್ಲಿ ಕೇಸ್‌ಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಹುಬ್ಬಳ್ಳಿ ಕೇಸ್‌ನಲ್ಲಿಯೂ ಮನವಿ ಕೊಟ್ಟಿದ್ದರು. ಅಷ್ಟೊಂದು ಜನರ ಮೇಲೆ ಕೇಸ್ ದಾಖಲಿಸುವ ಅಗತ್ಯ ಇಲ್ಲ‌ ಎಂಬುದು ಚರ್ಚೆಯಾಗಿದೆ. ಸಂಪುಟ ಸಭೆಯಲ್ಲಿ ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಜೆಪಿಯವರು ಆಡಳಿತದಲ್ಲಿದ್ದಾಗಲೂ ಸಹ ಇಂತಹ ಪ್ರಕರಣಗಳಲ್ಲಿ ಬೇಕಾದಷ್ಟು ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಮಾಡಿದ್ದಾರೆ‌.‌ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರ ವಿರುದ್ಧ ಕೇಸ್‌ಗಳಿದ್ದವು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಕೇಸ್‌ಗಳನ್ನು ವಾಪಸ್ ಪಡೆದಿದ್ದಾರೆ ಎಂದು ಹೇಳಿದರು.

ರಾಹುಲ್ ಖರ್ಗೆ ಅವರು ಸಿದ್ಧಾರ್ಥ ಟ್ರಸ್ಟ್‌‌ ನಿವೇಶನವನ್ನು ವಾಪಸ್ ನೀಡಿರುವ ಕುರಿತ ಪ್ರತಿಕ್ರಿಯಿಸಿ, ಯಾವುದೇ ಕಾನೂನು ಉಲ್ಲಂಘನೆ ಮಾಡದೆ ನಿವೇಶನ‌ ತೆಗೆದುಕೊಂಡಿದ್ದೇವೆ. ಆಪಾದನೆ ಮಾಡುತ್ತಿರುವುದರಿಂದ ಬೇಡ ಎಂದು ನಿವೇಶ ವಾಪಸ್ ನೀಡಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣಿಸುವುದೆಲ್ಲ ಹಳದಿ ಎಂಬಂತೆ, ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು‌.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News