ಬ್ಯಾಂಕ್‍ಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಡಾ.ಪುರುಷೋತ್ತಮ ಬಿಳಿಮಲೆ ಪತ್ರ

Update: 2024-10-14 14:28 GMT

 ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ರಾಜ್ಯದಲ್ಲಿನ ಬ್ಯಾಂಕ್‍ಗಳಲ್ಲಿ ಮತ್ತು ಸೇವಾ ಸಂಸ್ಥೆಗಳಲ್ಲಿ ಅನ್ಯಭಾಷೆಯ ಸಿಬ್ಬಂದಿಯಿಂದ ಸಾರ್ವಜನಿಕ ಸೇವೆಗೆ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಕನ್ನಡಬಾರದವರನ್ನು ವಿಮುಖಗೊಳಿಸಿ, ಆ ಹುದ್ದೆಗಳಿಗೆ ಕಡ್ಡಾಯವಾಗಿ ಕನ್ನಡಿಗರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರಕಾರದ ಹಿಂದಿ ಹೇರಿಕೆ ಖಂಡನೀಯವಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ಬ್ಯಾಂಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಅನಾಸಕ್ತರಾಗಿರುವ ಸಿಬ್ಬಂದಿಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವಂತಾಗಿದೆ. ಈ ಕೂಡಲೇ ದಕ್ಷಿಣ ಭಾರತೀಯರಾದ ವಿತ್ತ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಳೀಯ ಭಾಷೆ ತಿಳಿಯದ ನೌಕರರಿಗೆ ಸಾರ್ವಜನಿಕ ಸೇವೆಗೆ ಅವಕಾಶ ನೀಡಬಾರದೆಂದು ಸೂಚಿಸಿದ್ದ ಹಣಕಾಸು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿರುವ ಡಾ.ಬಿಳಿಮಲೆ, ಇಷ್ಟು ಸುದೀರ್ಘ ಅವಧಿಯ ನಂತರವೂ ಯಾವುದೇ ರಚನಾತ್ಮಕ ಬದಲಾವಣೆಗಳಾದ ಕಾರಣ ಭಾಷಾ ಪರ ಸಂಘಟನೆಗಳು, ಸ್ಥಳೀಯ ಜನರ ಭಾವನೆಗಳು ಘಾಸಿಗೊಂಡಿವೆ ಎಂದಿದ್ದಾರೆ.

ಕನ್ನಡ ಬಳಕೆ ಕುರಿತು ಜಿಲ್ಲಾಡಳಿತಗಳಿಗೆ ನಿರ್ದೇಶನ: ‘ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್, ಅಂಚೆ ಕಚೇರಿ, ವಿಮಾ ಕಚೇರಿಗಳಲ್ಲಿ ಹಿಂದಿ ಹೇರಿಕೆಯ ಸಮಸ್ಯೆ ಅಗಾಧವಾಗುತ್ತಿದ್ದು, ಕನ್ನಡ ಭಾಷೆಯ ಉಳಿವಿನ ದೃಷ್ಠಿಯಿಂದ ಇದು ಆತಂಕಕಾರಿಯಾಗಿದೆ. ಈ ಸಮಸ್ಯೆ ಒಂದು ಸಾಂಸ್ಕೃತಿಕ ಆಘಾತವಾಗಿ, ಸಂವಿಧಾನ ವಿರೋಧಿ ಧೋರಣೆಯಾಗಿ ನಮ್ಮನ್ನು ಎಚ್ಚರಿಸಬೇಕಿದ್ದು, ಜಿಲ್ಲಾ ಹಂತದ ಎಲ್ಲ ಹಣಕಾಸು ಸಂಸ್ಥೆಗಳು ತಮ್ಮ ನಿತ್ಯ ವ್ಯವಹಾರಗಳಲ್ಲಿ ಕನ್ನಡ ಬಳಸಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸೂಚನೆ ನೀಡಿದ್ದಾರೆ.

ಪತ್ರ ಬರೆದಿರುವ ಅವರು, ಕನ್ನಡ ಭಾಷೆ ಬಾರದ ಸೇವಾ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಸಾರ್ವಜನಿಕ ಸಂಪರ್ಕ ಕೆಲಸಗಳಲ್ಲಿ ತೊಡಗಿಕೊಳ್ಳದೆ ಇರಲು ನಿರ್ದೇಶನ ನೀಡಲು ಸೂಚಿಸಿ ಕೂಡಲೇ ಜಿಲ್ಲಾಮಟ್ಟದ ಸಭೆಗಳನ್ನು ನಡೆಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಈ ನಿರ್ದೇಶನ ಸಭೆಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಕನ್ನಡ ಪರ ಸಂಘಟನೆಗಳ ವಿಶ್ವಾಸವನ್ನು ಪಡೆಯಬೇಕು. ಕೈಗೊಂಡ ಕ್ರಮದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News