ತಮಿಳುನಾಡಿಗೆ ಇದುವರೆಗೆ 30 ಟಿಎಂಸಿ ನೀರು ಹರಿಸಲಾಗಿದೆ : ಡಿಸಿಎಂ ಡಿ.ಕೆ.ಶಿವಕುಮಾರ್
ಮಂಡ್ಯ/ ಬೆಂಗಳೂರು : “ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗೂ ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹರಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆ ನಂತರ ಮಾತನಾಡಿದ ಅವರು, “ಕಾವೇರಿ ಜಲಾನಯನ ಪ್ರದೇಶಗಳಲ್ಲಿ 1,657 ಕೆರೆಗಳಿವೆ. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕೆರೆಗಳನ್ನು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಸಚಿವರ ನೇತೃತ್ವದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. 5.90 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ, 27 ಲಕ್ಷ ಟನ್ ರಸಗೊಬ್ಬರ ಸಂಗ್ರಹ, 30 ಲಕ್ಷ ರೈತರಿಗೆ ಸಹಕಾರಿ ಸಂಘಗಳಿಂದ ತಲಾ 25 ಸಾವಿರ ಕೋಟಿ ರೂ. ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ನಮ್ಮ ಸರಕಾರ ರೈತರ ಬದುಕಿಗೆ ಪೂರಕವಾಗಿದೆ. ರೈತರ ಹಿತ ಕಾಯಲು ಬದ್ದತೆ ಹೊಂದಿದ್ದೇವೆ. ನಮ್ಮದು ಬೂಟಾಟಿಕೆಯ ಮಾತಲ್ಲ. ಪ್ರಚಾರಕ್ಕೆ ಮಾಡುವುದಲ್ಲ, ನಮ್ಮ ವಿಚಾರ, ಆಚಾರ ಎಲ್ಲವೂ ರೈತರ ಪರ. ಕಾವೇರಿ ನೀರು ನಿರ್ವಹಣಾ ಸಮಿತಿಯು ಜುಲೈ 11 ರಿಂದ 30 ರ ತನಕ 20 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಆದರೆ ನಾವು ನೀರನ್ನು ಹರಿಸಲಿಲ್ಲ. ನಮ್ಮ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿತ್ತು” ಎಂದರು.
ಕಾವೇರಿ ಆರತಿ ಆರಂಭಿಸಲು ಚಿಂತನೆ :
“ವಾರಣಾಸಿಯಲ್ಲಿ ಗಂಗಾ ಆರತಿ ನಡೆಸಿದಂತೆ, ಕಾವೇರಿ ಆರತಿ ಕಾರ್ಯಕ್ರಮ ಪ್ರಾರಂಭಿಸುವ ಆಲೋಚನೆ ಇದೆ. ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು ಹಾಗು ಅಧಿಕಾರಿಗಳು ಸೇರಿದ 20 ಜನರ ಸಮಿತಿಯನ್ನು ರಚನೆ ಮಾಡಿ, ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಲ್ಲಿಂದ ಒಂದು ತಂಡವನ್ನು ಕರೆದುಕೊಂಡು ಬಂದು ಯಾವ ಜಾಗದಲ್ಲಿ ಕಾವೇರಿ ಆರತಿ ನಡೆಸಬಹುದು ಎಂದು ಜಾಗ ಗುರುತಿಸಲಾಗುವುದು. ಒಂದು ತಿಂಗಳ ಒಳಗಾಗಿ ಈ ಕಾರ್ಯಕ್ರಮ ಮಾಡಲಾಗುವುದು. ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಇತರೇ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸುತ್ತವೆ” ಎಂದು ಹೇಳಿದರು.