ಬೆಳಗಾವಿಯಲ್ಲಿ ಡಿಕೆಶಿ ಸಭೆಗೆ ಗೈರು; ಕಾರಣ ತಿಳಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Update: 2023-10-19 17:36 GMT

ಬೆಂಗಳೂರು: ನಿನ್ನೆ (ಬುಧವಾರ) ಬೆಳಗಾವಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ವಾಗತಕ್ಕೆ ಜಿಲ್ಲೆಯ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಹೋಗದ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಒಂದು ತಿಂಗಳು ಮೊದಲೆ ನನ್ನ ಮೊಮ್ಮಗಳ ನಾಮಕರಣ ನಿಗದಿಯಾಗಿತ್ತು. ಹೀಗಾಗಿ ನಾನು ಭದ್ರಾವತಿಗೆ ಹೋದೆ. ಉಸ್ತುವಾರಿ ಸಚಿವರೂ ಮೊದಲೇ ತಿಳಿಸಿದ್ದರು, ಅವರು ಬೆಂಗಳೂರಲ್ಲೆ ಇದ್ದರು. ದಸರಾ ಹಬ್ಬ, ವಿವಿಧ ಕಾರಣಗಳಿಂದ ಇತರ ಶಾಸಕರು ಹೋಗಿರಲಿಲ್ಲ. ನಾನು ಅಧ್ಯಕ್ಷರಿಗೆ ಮುಂಚಿತವಾಗಿ ಗಮನಕ್ಕೆ ತಂದಿದ್ದೆʼʼ ಎಂದು ಹೇಳಿದರು.

ʼʼಬೆಳಗಾವಿ ರಾಜಕೀಯ ವಿಷಯಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ಯಾಕೆ ಎಳೆದು ತರ್ತೀರಾ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ ಅವರು, ಅಧ್ಯಕ್ಷರು ಇಡೀ ರಾಜ್ಯ ಸುತ್ತಾಡಿ 135 ಶಾಸಕರು ಗೆಲ್ಲುವುದಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆʼʼ ಎಂದು ಅವರು ಹೇಳಿದರು.

ʼಡಿಕೆಶಿ ಸಮರ್ಥರಿದ್ದಾರೆʼ:

ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಸಮರ್ಥರಿದ್ದಾರೆ. ಯಾವುದೆ ಕಾನೂನು ಹೋರಾಟವಾದರೂ ಸಮರ್ಥವಾಗಿ ಎದುರಿಸುತ್ತಾರೆ. ಎಲ್ಲವನ್ನೂ ನಿಭಾಯಿಸುತ್ತಾರೆ. ಸಂವಿಧಾನ ಕಾನೂನಿನ ಬಗ್ಗೆ ಗೌರವವಿದೆ. ಸಮರ್ಥವಾಗಿ ನಿಭಾಯಿಸಿ ಜಯಶಾಲಿಯಾಗಿ ಹೊರಬರುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News