ಬಿಡದಿಯ ವರೆಗೆ ಮೆಟ್ರೋ ವಿಸ್ತರಣೆಗೆ ಡಿಪಿಆರ್: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-11-10 12:23 GMT

ಬೆಂಗಳೂರು, ನ. 10: ‘ನಮ್ಮ ಮೆಟ್ರೋವನ್ನು ಬಿಡದಿಯ ವರೆಗೂ ವಿಸ್ತರಣೆ ಮಾಡಲು ಸರ್ವೇ ಮಾಡಿಸಲಾಗುತ್ತಿದ್ದು, ಈ ವಿಚಾರವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ಇನ್ನು ಬಿಡದಿ ಯೋಜನಾ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತರಬೇತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ 1ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಇವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಮೆಟ್ರೋ ಯೋಜನೆ ವಿಸ್ತರಿಸಲು ಶಾಸಕರು, ಸಂಸದರು ಮನವಿ ಸಲ್ಲಿಸಿದ್ದರು. ಹೀಗಾಗಿ ಬಿಎಂಆರ್‍ಸಿಎಲ್ ಅವರಿಗೆ ಯೋಜನಾ ವರದಿ ಸಿದ್ದಪಡಿಸಲು ತಿಳಿಸಿದ್ದೇನೆ ಎಂದು ನುಡಿದರು.

‘ಬಿಡದಿ ಯೋಜನಾ ಪ್ರಾಧಿಕಾರವನ್ನು ತೆಗೆದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮಾಡುತ್ತೇವೆ. ಬಿಡದಿಯಲ್ಲಿ ಸುಮಾರು 10ಸಾವಿರ ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು, ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗದಲ್ಲೂ ಸಿಗಬೇಕು ಎನ್ನುವ ಉದ್ದೇಶ ನಮ್ಮದು. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಈ ಎರಡು ಯೋಜನೆಗಳನ್ನು ಈ ಶುಭದಿನದಂದು ಘೋಷಿಸುತ್ತೇನೆ. ಈ ಯೋಜನೆಗಳ ಮೂಲಕ ಈ ಭಾಗ ಅಭಿವೃದ್ಧಿ ಆಗಬೇಕು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಬೇಕು’ ಎಂದು ಅವರು ಹೇಳಿದರು.

‘ಈ ಭಾಗದ ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಕಾರ್ಮಿಕರು, ಅವರ ಮಕ್ಕಳು ಹೀಗೆ ಎಲ್ಲರಿಗೂ ಹೊಸ ಶಕ್ತಿ ತುಂಬಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಟೊಯೋಟಾ ಸಂಸ್ಥೆ ಹೆಣ್ಣುಮಕ್ಕಳ ತರಬೇತಿ ಕೇಂದ್ರ ತೆರೆದಿರುವುದು ಸಂತೋಷದ ವಿಚಾರ. ಮಹಿಳೆಯರಿಗೆ ಶಕ್ತಿ ತುಂಬುವುದು ಸರಕಾರದ ಸಂಕಲ್ಪ. ‘ಶಕ್ತಿ’ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡಿದ ಪರಿಣಾಮ ಮೈಸೂರು ದಸರಾ ಆಚರಣೆ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಮಹಿಳೆಯರಿಗೆ ರಾಜಕೀಯದಲ್ಲೂ ಶೇ.33ರಷ್ಟು ಮೀಸಲಾತಿ ಜಾರಿಗೆ ತಂದು ಈ ಭಾಗದಲ್ಲಿ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ನನಗೂ ಟೊಯೋಟಾ ಸಂಸ್ಥೆಗೂ ಹಳೇ ಸಂಬಂಧ. ಮನೋರಮ ಮದ್ವರಾಜ್ ಆರಂಭ ಮಾಡಿದರು. ಸಾತನೂರಲ್ಲಿ ಆರಂಭ ಆಗಬೇಕಿತ್ತು. ರೈತರ ವಿರೋಧ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಸಂಸ್ಥೆ ಆರಂಭವಾಯಿತು. ಟೊಯೋಟಾ ದೇಶಕ್ಕೆ ಆಸ್ತಿ, ಈ ಸಂಸ್ಥೆ, ಅದರ ಸಿಬ್ಬಂದಿ, ಅದರ ವಾಹನಗಳ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಟೊಯೋಟಾ ಸಂಸ್ಥೆ ಜತೆಗೆ ನಾನಿದ್ದೇನೆ, ನಾನು ಟೊಯೋಟಾ ಕುಟುಂಬದ ಸದಸ್ಯ. ನಿಮ್ಮ ಜತೆ ನಾನಿದ್ದೇನೆ ಎಂದು ಅವರು ಹೇಳಿದರು.

ಈ ಸಂಸ್ಥೆ ರಾಮನಗರ ಜಿಲ್ಲೆಯ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದೆ. ಆದರೆ ಯೂನಿಯನ್ ಚಟುವಟಿಕೆ ಮೂಲಕ ಕೆಲವರು ಗೊಂದಲ ಮೂಡಿಸಿದ್ದರು. ಯಾವುದೇ ಚಟುವಟಿಕೆ ಅಭಿವೃದ್ಧಿಗೆ ಮಾರಕ ಆಗಬಾರದು. ಒಂದು ಸಂಸ್ಥೆ ಆರಂಭಿಸಿ, ಬಂಡವಾಳ ಹೂಡಿಕೆ ಮಾಡಬೇಕಾದರೆ ಅನೇಕ ಸರಕಾರದ ಕಾನೂನು ಮುಂದಿಟ್ಟುಕೊಂಡು ಯೂನಿಯನ್‍ಗಳು ಅಡ್ಡಿ ಬರುತ್ತವೆ. ಇದರಿಂದ ಅಭಿವೃದ್ಧಿಗೆ ಮಾರಕವಾಗುತ್ತದೆ. ನೆರೆಯ ಕೇರಳದಲ್ಲಿ ಯೂನಿಯನ್‍ಗಳು ಹೆಚ್ಚಾದ ಪರಿಣಾಮ ಅಲ್ಲಿ ಹೆಚ್ಚಿನ ಬುದ್ಧಿವಂತರು ಇದ್ದರೂ ಯಾರೂ ಬಂಡವಾಳ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಬಂಡವಾಳ ವಿಸ್ತರಣೆ ಮಾಡಿ ಹಚ್ಚಿನ ಜನರಿಗೆ ಕೆಲಸ ನೀಡಲು ಟೊಯೋಟಾ ಸಂಸ್ಥೆ ಮುಂದಾಗಿದೆ ಎಂದು ಶಿವಕುಮಾರ್ ಹೇಳಿದರು.

‘ಟೊಯೋಟಾ ಸಂಸ್ಥೆಗೂ ಕಿವಿಮಾತು ಹೇಳಿದ್ದೇನೆ. ಯಾರು ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಕಳೆದುಕೊಳ್ಳುತ್ತಾರೋ ಅವರಿಗೆ ಹಾಗೂ ಅವರ ಮಕ್ಕಳಿಗೆ ಕೆಲಸದಲ್ಲಿ ಮೊದಲ ಆದ್ಯತೆ ನೀಡಬೇಕು. ಈ ವಿಚಾರವಾಗಿ ಸರಕಾರದ ಕಾನೂನು ಇದೆ. ಕೇವಲ ಟೊಯೋಟಾ ಮಾತ್ರವಲ್ಲ ಎಲ್ಲ ಸಂಸ್ಥೆಗಳ ಜೊತೆ ಚರ್ಚೆ ಮಾಡಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News