"ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ": ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿ ಮಾಡಿದ ಡಾ.ಶರಣ ಪ್ರಕಾಶ್ ಪಾಟೀಲ್

Update: 2024-08-02 18:26 GMT

ಹೊಸದಿಲ್ಲಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಜಿಲ್ಲೆಯಾದ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಸ್ಥಾಪಿಸಬೇಕೆಂಬ ತನ್ನ ಬೇಡಿಕೆಯನ್ನು ರಾಜ್ಯ ಸರಕಾರ ಮತ್ತೊಮ್ಮೆ ಕೇಂದ್ರ ಸರಕಾರದ ಮುಂದೆ ಪುನರುಚ್ಚರಿಸಿದೆ.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶುಕ್ರವಾರ ಹೊಸದಿಲ್ಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ರಾಯಚೂರಿಗೆ ಶೀಘ್ರವೇ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದರು. ಅಲ್ಲದೆ, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‍ಐ ಕೋಟಾವನ್ನು ಶೇ.15ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.

ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರಣ ಪ್ರಕಾಶ್ ಪಾಟೀಲ್, ರಾಯಚೂರಿನಲ್ಲಿ ಏಮ್ಸ್ ಅಸ್ಪತ್ರೆ ಸ್ಥಾಪನೆ ಮಾಡಬೇಕು ಎಂಬುದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ದೇಶದಲ್ಲಿ ಕರ್ನಾಟಕ ಸೇರಿದಂತೆ ಒಂದೆರಡು ರಾಜ್ಯಗಳಿಗೆ ಮಾತ್ರ ಮಂಜೂರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಮ್ಸ್ ಸ್ಥಾಪನೆಯಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಗಲಿರುವ ಅಭಿವೃದ್ಧಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನ ಮುಗಿಯುವ ಮೊದಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯನ್ನು ಕೇಂದ್ರವು ಘೋಷಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್‍ಆರ್‍ಐ ಕೋಟಾ:

2025-26ನೇ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಸೂಪರ್‍ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ನಡ್ಡಾ ಅವರಿಗೆ ಮನವಿ ಮಾಡಲಾಗಿದೆ. ರಾಜ್ಯದ 22 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್‍ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ.15ರಷ್ಟು ಎನ್‍ಆರ್‍ಐ ಕೋಟಾವನ್ನು ಮಂಜೂರು ಮಾಡುವಂತೆ ಗಮನ ಸೆಳೆಯಲಾಗಿದೆ ಎಂದು ಅವರು ಹೇಳಿದರು.

ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್‍ಆರ್‍ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ ಮತ್ತು ಅಸ್ತಿತ್ವದಲ್ಲಿರುವ ಪ್ರವೇಶಕ್ಕೆ ಅಡ್ಡಿಪಡಿಸುವುದು ವಿದ್ಯಾರ್ಥಿಗಳು ಮತ್ತು ಪೆÇೀಷಕರಿಂದ ಪ್ರತಿಭಟನೆ ವ್ಯಕ್ತವಾಗಬಹುದು. ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ 22 ಸರಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಲ್ಲಿ 3,450 ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ ಶೇ.85ರಷ್ಟು(2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ ಶೇ.15ರಷ್ಟು ಅಖಿಲ ಭಾರತ ಕೋಟಾ ಆಗಿದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News