ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಿ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣ ಪ್ರಕರಣ ಸಂಬಂಧ ಪೆನ್‍ಡ್ರೈವ್ ಸೋರಿಕೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇರುವ ಆರೋಪ ಹಿನ್ನೆಲೆ ಈ ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ನೈತಿಕತೆ ಇದ್ದಲ್ಲಿ ಆರೋಪ ಕೇಳಿಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಪೆನ್‍ಡ್ರೈವ್ ಪ್ರಕರಣದ ಬಗ್ಗೆ ವಿಶೇಷ ತನಿಖಾ ದಳ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದಲ್ಲಿ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಅನ್ಯಾಯವಾಗಿರುವ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು. ಅಲ್ಲದೆ, ಈ ಪ್ರಕರಣದಲ್ಲಿ ಕಾಂಗ್ರೆಸ್‍ಗೆ ಪ್ರಚಾರ ಪಡೆಯುವ ಉದ್ದೇಶವೇ ಹೊರತು ಪಾರದರ್ಶಕ ತನಿಖೆ ನಡೆಸುವುದಲ್ಲ. ಸಿಟ್ ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಇದು “ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ” ಆಗಿದೆ ಎಂದು ಆರೋಪಿಸಿದರು.
ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕೇವಲ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತ್ರ ಎಸ್‍ಐಟಿ ತನಿಖೆ ಮಾಡುತ್ತಿದೆ. ಇವರಿಬ್ಬರಿಗೆ ಲುಕೌಟ್ ನೋಟಿಸ್ ಹೊರಡಿಸಿದ್ದಾರೆ. ಆದರೆ 25 ಸಾವಿರ ಪೆನ್‍ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಂಚಿಕೆ ಮಾಡಿದವರ ಬಗ್ಗೆ ಲುಕೌಟ್ ನೋಟಿಸ್ ಎಸ್‌ಐಟಿ ಹೊರಡಿಸಿಲ್ಲ. ಒಟ್ಟಿನಲ್ಲಿ ಈ ಪೆನ್‍ಡ್ರೈವ್ ಹಿಂದೆ ಯಾರ ಪಾತ್ರವಿದೆ ಎಂಬ ಸತ್ಯಾಂಶ ಹೊರಬರಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.
ಅಪಹರಣವಾಗಿದ್ದಾರೆ ಎನ್ನಲಾದ ಮಹಿಳೆ ಪತ್ತೆಯಾಗಿ ಎರಡು ದಿನವಾದರೂ ಇನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ. ಆ ಪೆನ್‍ಡ್ರೈವ್ ಸೋರಿಕೆ ಮಾಡಿದವರಿಗೆ ಯಾವ ನೋಟಿಸ್ ಕೊಟ್ಟಿದ್ದೀರಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಮೈತ್ರಿ ಮುಂದುವರಿಕೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಮುಂದುವರೆಸುತ್ತಾರೋ ಇಲ್ಲವೋ ಎಂಬ ಚಿಂತೆ ನನಗೂ ಇಲ್ಲ. ಪೆನ್‍ಡ್ರೈವ್ ಪ್ರಕರಣ ತಾರ್ಕಿಕ ಅಂತ್ಯವಾಗಬೇಕು ಎಂದು ನುಡಿದರು.
ಪರಿಷತ್ತು: ವಿಧಾನಪರಿಷತ್‍ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16ರವರೆಗೆ ಅವಕಾಶವಿದೆ. ದೀರ್ಘಾವಧಿ ಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ ಎಂದು ಅವರು ಹೇಳಿದರು.
ರೆಕಾರ್ಡ್ ಕೇಳಿಸಿದ ಕುಮಾರಸ್ವಾಮಿ..!
ಹಾಸನದ ಪೆನ್‍ಡ್ರೈವ್ ಕುರಿತಂತೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳಿಸಿದರು. ಅದರಲ್ಲಿ 700 ಪೆನ್‍ಡ್ರೈವ್‍ಗಳನ್ನು ಆನಗೋಳದಲ್ಲಿ ಹಂಚಿಕೆ ಮಾಡಿರುವುದಾಗಿ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ.
“ರಾಹುಲ್ ಗಾಂಧಿ ವಿಚಾರಣೆ ನಡೆಸಿ’
ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಎಸ್‌ಐಟಿ ವಿಚಾರಣೆಗೆ ಕರೆಯಬೇಕು. ಅಲ್ಲದೆ, ರಾಹುಲ್ ಗಾಂಧಿ ಅವರು ಅಂಕಿ ಅಂಶಗಳ ಸಮೇತ ಈ ವಿಷಯ ಹೇಳಿದ್ದಾರೆ. ಎಲ್ಲರಿಗಿಂತ ಮೊದಲೇ ಈ ಮಾಹಿತಿ ಅವರಿಗೆ ಸಿಕ್ಕಿರಬೇಕು. ಹೀಗಾಗಿ ಅವರಿಂದ ತನಿಖಾ ತಂಡ ಮಾಹಿತಿ ಪಡೆಯಬೇಕು. ಕೂಡಲೇ ಅವರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.