ಬರ ನಿರ್ವಹಣೆ; 324 ಕೋಟಿ ರೂ. ಬಿಡುಗಡೆ: ಸಚಿವ ಚಲುವರಾಯಸ್ವಾಮಿ
ಬೆಳಗಾವಿ : ಮುಂದಿನ ದಿನಗಳಲ್ಲಿ ಕುಡಿಯುವ ನೀರಿ ಪೂರೈಕೆ, ಗೋಶಾಲೆ, ಮೇವಿನ ಬ್ಯಾಂಕ್ ನಿರ್ವಹಣೆ ಇತರೆ ತುರ್ತು ಬರ ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಆರ್ ಬಿಐ ನಿರ್ದೇಶನದಂತೆ ರೈತರ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಅಲ್ಪಾವಧಿಯಿಂದ ಮಧ್ಯಾವಧಿ ಅಥವಾ ದೀರ್ಘಾವಧಿವರೆಗೆ ರೀ ಸ್ಟ್ರಕ್ಚರ್ ಮಾಡಲು ಎಸ್‍ಎಲ್‍ಬಿಸಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯನ್ವಯ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಬೆಳೆಹಾನಿ ಇನ್‍ಪುಟ್ ಸಬ್ಸಿಡಿಗೆ ಎನ್‍ಡಿಆರ್‍ಎಫ್ ಅಡಿಯಲ್ಲಿ ರೂ.4663.12 ಕೋಟಿ ರೂ.ಗಳ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.