ಎಟಿಎಂ ಸರಕಾರದ ಆಡಳಿತಾವಧಿಯಲ್ಲಿ ಗುತ್ತಿಗೆದಾರರಿಗೆ ಬಿಲ್ ಬಾಕಿ ನಿಶ್ಚಿತ, ಅವಮಾನ ಉಚಿತ: ಬಿಜೆಪಿ ಲೇವಡಿ

Update: 2023-08-12 16:10 GMT

ಬೆಂಗಳೂರು, ಆ. 12: ‘ಗುತ್ತಿಗೆದಾರರು ಕಾಂಗ್ರೆಸ್ಸರಕಾರದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಂತೆ ಏಕಾಏಕಿ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿದೆ. ಅಂದ ಹಾಗೆ ಬಿಬಿಎಂಪಿ ಕಚೇರಿಗೆ ಬೆಂಕಿ ಸಂಬಂಧಿತ ಕಾಂಗ್ರೆಸ್ ಪಕ್ಷದ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದ್ದು, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಕಾಂಗ್ರೆಸ್ಸಿನ ಸುಳ್ಳುಗಳನ್ನು ಒಪ್ಪಲಾಗುತ್ತಿಲ್ಲ ಎಂದು ಆ ಮೂಲಕ ಹೇಳಿದ್ದಾರೆ. ಸುಳ್ಳೇ ಕಾಂಗ್ರೆಸ್ ಮನೇದೇವ್ರು’ ಎಂದು ಬಿಜೆಪಿ ಲೇವಡಿ ಮಾಡಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದ ಗುತ್ತಿಗೆದಾರರಿಗೆ ಎಟಿಎಂ ಸರಕಾರದ ಆಡಳಿತಾವಧಿಯಲ್ಲಿ ಬಿಲ್ ಬಾಕಿ ‘ನಿಶ್ಚಿತ', ಅವಮಾನ ‘ಉಚಿತ', ಬೆದರಿಕೆ ‘ಖಚಿತ' ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಗುತ್ತಿಗೆದಾರರ ಬಳಿಕ ಈಗ ರಾಯಚೂರು ಗುತ್ತಿಗೆದಾರರು, ದಿವಾಳಿ ಸರಕಾರದ ದುರ್ಬಲ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸರಕಾರ ಮಾತ್ರ ಗುತ್ತಿಗೆದಾರರನ್ನೇ ತಪ್ಪಿತಸ್ಥರನ್ನಾಗಿಸಿ, ತನಗೆ ತಾನೇ ಸಾಚಾತನದ ಸರ್ಟಿಫಿಕೇಟ್ ನೀಡಿಕೊಳ್ಳುತ್ತಿದೆ’ ಎಂದು ಟೀಕಿಸಿದೆ. 

‘ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲ’ ಎನ್ನುವಂತಹ ಸ್ಥಿತಿ ಕಾಂಗ್ರೆಸ್ ಶಾಸಕರದ್ದಾಗಿದೆ. ಒಂದು ಕಡೆ ಸಚಿವರು ಶಾಸಕರ ಎದುರು ಧಿಮಾಕು ದೌಲತ್ತು ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಅವರ ದುರಹಂಕಾರಕ್ಕೆ ಬೆಂಗಳೂರಿನ ಶಾಸಕರು ತಲೆ ಚಚ್ಚಿಕೊಳ್ಳುವಂತಾಗಿದೆ. ಶಾಸಕರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ರೂ, ಡಿ.ಕೆ.ಶಿವಕುಮಾರ್ ಅವರು ಕ್ಯಾರೆ ಎನ್ನುತ್ತಿಲ್ಲ. ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅಂತೂ ಅನಾಥರಾಗಿದ್ದಾರೆ. ಯಾವುದೇ ಕ್ಷೇತ್ರವಿರಲಿ ಎಟಿಎಂ ಸರಕಾರಕ್ಕೆ ಕಮಿಷನ್ ಗ್ಯಾರಂಟಿ ಆದ್ರೆ ಮಾತ್ರ ಅನುದಾನಕ್ಕೆ ಪರ್ಮಿಷನ್’ ಎಂದು ಬಿಜೆಪಿ ಆರೋಪಿಸಿದೆ.

‘ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಹೊಸ ಘೋಷಣೆ. ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ. ಇದು ಉಚಿತ, ಖಚಿತ, ನಿಶ್ಚಿತ. ಬಿಎಂಟಿಸಿ ನೌಕರರಿಗೆ ತಿಂಗಳು ಮುಗಿದು 2 ವಾರಗಳಾದರೂ ಸಂಬಳ ಕೈ ಸೇರಿಲ್ಲ, ಕೆಎಸ್ಸಾರ್ಟಿಸಿ ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ, 3ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೂ ಸಂಬಳ ಸಿಕ್ಕಿಲ್ಲ. ಸರಕಾರಿ ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಜಮೆ ಆಗದ ಸಂಬಳ. ಗುತ್ತಿಗೆ ಆಧಾರದ ನೌಕರರಿಗೆ ತಲುಪಿಲ್ಲ ಸಂಬಳ. ಇನ್ನೂ ಹಲವು ಇಲಾಖೆಗಳ ಸರಕಾರಿ ನೌಕರರು ಸಂಬಳ ಸಿಗದೆ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟ ಸಿದ್ದರಾಮಯ್ಯ ಅವರ ಸರಕಾರ, ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ ಸಂಬಳವನ್ನು ಜಾರಿಗೊಳಿಸಿ ಸ್ವಾಮಿ’ ಎಂದು ಬಿಜೆಪಿ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News