ನಿಖಿಲ್ ಗೆದ್ದು ವಿಧಾನಸೌಧಕ್ಕೆ ಹೋಗುವುದು ಖಚಿತ : ಎಚ್.ಡಿ.ಕುಮಾರಸ್ವಾಮಿ

Update: 2024-11-07 13:48 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಚನ್ನಪಟ್ಟಣದ ಜನರ ಆಶೀರ್ವಾದದಿಂದ ನಿಖಿಲ್ ಅವರು ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಚನ್ನಪಟ್ಟಣದ ವಿರೂಪಾಕ್ಷಿಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ವಿಧಾನಸಭೆ ಕಲಾಪದಲ್ಲಿ ರೂಲ್ 69ರ ಅಡಿಯಲ್ಲಿ ಚರ್ಚೆ ಮಾಡುತ್ತಾರೆ. ಇವರ ಎಲ್ಲಾ ಟೀಕೆಗೂ ನಿಖಿಲ್ ವಿಧಾನಸಭೆಗೆ ಪ್ರವೇಶ ಮಾಡಿ ಉತ್ತರ ಕೊಡುತ್ತಾರೆ ಎಂದರು.

ಚುನಾವಣೆಗೆ ಮೊದಲು ಡಿ.ಕೆ. ಸಹೋದರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹಾದಿ ಬೀದಿಯಲ್ಲಿ ಬೈದಾಡಿಕೊಂಡಿದ್ದರು. ಈಗ ಪರಸ್ಪರ ಅಪ್ಪಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಡಿ.ಕೆ.ಸುರೇಶ್ ಅವರು ಯೋಗೇಶ್ವರ್ ಗೆ ಬೈದಿರುವ ಆಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ವ್ಯಕ್ತಿತ್ವ ಏನೆಂದು ತಿಳಿಯುತ್ತದೆ. ಈ ಸುರೇಶ್ ಎಂತಹ ವ್ಯಕ್ತಿ ಎನ್ನುವುದಕ್ಕೆ ಆಡಿಯೋ ಸಾಕ್ಷಿ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿಎಂ, ಡಿಸಿಎಂ ಸೇರಿ ಹಲವು ಮಂತ್ರಿಗಳು ಚನ್ನಪಟ್ಟಣಕ್ಕೆ ಬಂದು ಭಾಷಣ ಮಾಡಿದ್ದಾರೆ. ಸಿಎಂ ಭಾಷಣದಲ್ಲಿ ಚನ್ನಪಟ್ಟಣಕ್ಕೆ ಏನು ಕೊಡುತ್ತೇವೆ ಅನ್ನುವುದೇ ಇಲ್ಲ. ದೇವೇಗೌಡರು, ನಿಖಿಲ್ ಹಾಗೂ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಕೇವಲ ನಮ್ಮನ್ನು ಬೈದುಕೊಂಡು ಹೋದರೆ ವೋಟು ಸಿಗುತ್ತದೆ ಎಂದು ಅವರು ಭಾವನೆ ಇರಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News