ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ರಾಷ್ಟ್ರಪತಿಗೆ ಪತ್ರ

Update: 2024-11-07 09:49 GMT

ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಂಗಳೂರು: ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಕರ್ನಾಟಕದ ಸಾಹಿತಿಗಳು, ಚಿಂತಕರು ಸಾಮಾಜಿಕ ಹೋರಾಟಗಾರರು ಒಟ್ಟಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಬರೆಯಲಾಗಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಭಾರತವು ಒಂದು ಒಕ್ಕೂಟ ವ್ಯವಸ್ಥೆಯಾಗಿದೆ. ಗಣತಂತ್ರದ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ. ಇತ್ತೀಚಿಗೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಬೆಳವಣಿಗೆ ದೇಶದಲ್ಲಿ ನಡೆಯುತ್ತಿದೆ. ರಾಜ್ಯಗಳು ದುರ್ಬಲಗೊಳ್ಳುವ ಆತಂಕ ಕಾಡತೊಡಗಿದೆ. ಒಕ್ಕೂಟ ಸರ್ಕಾರವು ಕೆಲ ರಾಜ್ಯ ಸರ್ಕಾರಗಳನ್ನು ತಾರತಮ್ಯದಿಂದ ನಡೆಸಿಕೊಳ್ಳುವ ಪರಿಪಾಠ ನಿರಂತರವಾಗಿ ಮುಂದುವರಿದಿರುವುದರಿಂದ ನಮ್ಮ ಸೌಹಾರ್ದ ಪರಂಪರೆಗೆ ದೊಡ್ಡ ಹೊಡೆತ ಬೀಳುವಂತಾಗಿದೆ. ಈ ಬೆಳವಣಿಗೆಯಿಂದ ದೇಶದ ಐಕ್ಯತೆಗೆ ಭಂಗವುಂಟಾಗುವ ಭಯ ಕಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ರಾಜ್ಯ ದೇಶದಲ್ಲೇ ಅತೀ ಹೆಚ್ಚು ತೆರಿಗೆಯನ್ನು ಕೇಂದ್ರಕ್ಕೆ ಸಂದಾಯ ಮಾಡುತ್ತಿದ್ದರೂ, ಕರ್ನಾಟಕಕ್ಕೆ ತೆರಿಗೆಯ ನ್ಯಾಯಯುತ ಪಾಲನ್ನು ನೀಡಲಾಗುತ್ತಿಲ್ಲ. ಇದು ತಾರತಮ್ಯ ಧೋರಣೆಯಲ್ಲದೆ ಬೇರೇನೂ ಅಲ್ಲ. ರಾಜ್ಯದಿಂದ ನೀಡಿದ ತೆರಿಗೆಯಲ್ಲಿ ನ್ಯಾಯವಾದ ಪಾಲನ್ನು ಕೇಳುವ ಕರ್ನಾಟಕ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುವ ಹುನ್ನಾರವು ಖಂಡನೀಯವಾಗಿದೆ. ಇದಲ್ಲದೆ ರಾಜ್ಯದ ಅಭಿವೃದ್ಧಿಯನ್ನು ಒಕ್ಕೂಟ ಸರ್ಕಾರ ಬೇಕೆಂತಲೇ ಪರೋಕ್ಷವಾಗಿ ಕಡೆಗಣಿಸುತ್ತಿದ್ದು, ಈ ಧೋರಣೆಯೂ ಖಂಡನೀಯವಾಗಿದೆ ಎಂದು ಪತ್ರದಲ್ಲಿ ತಿಳಿಸಿಲಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿನ ಸೌಹಾರ್ದ ಭಾವವನ್ನು ಮರೆತು, ತಮ್ಮ ತಾಳಕ್ಕೆ ಕುಣಿಯದ ಸರ್ಕಾರಗಳನ್ನು ಕಡೆಗಣಿಸುವ, ಅವುಗಳನ್ನು ಉರುಳಿಸುವ ಕುಟಿಲ ತಂತ್ರಗಳನ್ನು ಲಜ್ಜೆಯಿಲ್ಲದೆ ನಡೆಸುತ್ತಿರುವುದು ನಮಗೆ ನೋವುಂಟು ಮಾಡಿದೆ. ರಾಜ್ಯ ಸರ್ಕಾರಗಳನ್ನು ಹಣಿಯಲು ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಸಿಬಿಐ, ಇಡಿ ಮುಂತಾದವುಗಳನ್ನು ದುರುಪಯೋಗ ಪಡಿಸುತ್ತಿರುವುದು ಕಂಡು ಬಂದಿದೆ. ಈ ಬೆಳವಣಿಗೆಗಳು ಒಕ್ಕೂಟ ವ್ಯವಸ್ಥೆಗೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಎಸಗುವ ಅಪಚಾರವಾಗಿರುತ್ತದೆ. ಇನ್ನೊಂದೆಡೆ ಕರ್ನಾಟಕಕ್ಕೆ ನ್ಯಾಯಯುತ ತೆರಿಗೆ ಪಾಲನ್ನು ನೀಡದೆ ವಂಚನೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ತಡೆ ಒಡ್ಡಲಾಗುತ್ತಿದೆ. ಆದ್ದರಿಂದ ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ತಾವು ಮಧ್ಯಪ್ರವೇಶಿಸಿ ಭಾರತ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸಲಹೆ ಸೂಚನೆ ಕೊಡುವ ಮೂಲಕ ಭಾರತದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದ ಹಿತ ಕಾಯುವಂತೆ ಸಮಸ್ತ ಕನ್ನಡಿಗರ ಪರವಾಗಿ ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News