ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು; 52 ಕೋಟಿ ರೂ.ವೆಚ್ಚದಲ್ಲಿ ಕೊಳವೆ ಮಾರ್ಗ ನಿರ್ಮಾಣ : ಎಂ.ಬಿ.ಪಾಟೀಲ್
ಬೆಂಗಳೂರು : ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ. ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು 52 ಕೋಟಿ ರೂ. ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್.ಪೈಪುಗಳನ್ನು ಅಳವಡಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
43 ಕಿ.ಮೀ. ದೂರದ ಕೊಲಾರದಿಂದ ವಿಜಯಪುರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು 10.8 ಕಿ.ಮೀ. ಉದ್ದದ ಪಿ.ಎಸ್.ಸಿ ಕೊಳವೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಇದರಿಂದ ನೀರಿನ ಸೋರಿಕೆ ವಿಪರೀತ ಹೆಚ್ಚಾಗಿದೆ. ಇದನ್ನು ಬದಲಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ವಿವಿಧ ಕಾರಣಗಳಿಂದಾಗಿ ಆಗಿರಲಿಲ್ಲ. ಆದರೆ, ಈಗ ಅದಕ್ಕೆ ಅಂತಿಮ ಮುದ್ರೆ ಒತ್ತಿದ್ದು, ಹಣ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಆರಂಭದಲ್ಲಿ ಈ ಕೊಳವೆ ಮಾರ್ಗ ಬದಲಿಸಲು 32 ಕೋಟಿ ರೂ. ವೆಚ್ಚಕ್ಕೆ ಅಂದಾಜು ಮಾಡಲಾಗಿತ್ತು. ಕಾಮಗಾರಿ ವಿಳಂಬವಾದ ಕಾರಣ ಅಂದಾಜು ವೆಚ್ಚ ಹೆಚ್ಚಾಗಿ 52 ಕೋಟಿ ರೂ.ಗೆ ಏರಿದೆ. ಈಗ ಪರಿಷ್ಕೃತ ಅಂದಾಜು ವೆಚ್ಚಕ್ಕೂ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಇದರ ಜತೆಗೆ ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆಯ ಭಾಗವಾಗಿ ಆಲಮಟ್ಟಿ ಹಿನ್ನೀರಿನ ರಂಭಾಪುರಿ ಬಳಿ ಜಾಕ್ವೆಲ್ ನಿರ್ಮಾಣ ಅಗತ್ಯವಿದೆ. ಇದು 111 ದಶಲಕ್ಷ ಲೀಟರ್ ನೀರು ಶುದ್ಧೀಕರಣ ಸಾಮಥ್ರ್ಯ ಹೊಂದಿರಲಿದೆ. ಈ ಸಂಬಂಧ ವಿಸೃತ ಯೋಜನಾ ವರದಿ ಸಿದ್ಧಪಡಿಸಲು 1.36 ಕೋಟಿ ರೂ. ಒದಗಿಸಲಾಗುವುದು. ತಕ್ಷಣವೇ ಈ ಕಾಮಗಾರಿಯನ್ನೂ ಆರಂಭಿಸಬೇಕು ಎಂದು ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರದ ಅಮೃತ್ ಯೋಜನೆಯ ಕಾಮಗಾರಿ ವಿಳಂಬ :
ವಿಜಯಪುರ ನಗರದಲ್ಲಿ ಕೇಂದ್ರ ಸರಕಾರದ ಅಮೃತ್ 2.0 ಯೋಜನೆಯ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದಿರುವ ಜೈನ್ ಇರಿಗೇಶನ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಸಂಸ್ಥೆಯು ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಒಪ್ಪಿಕೊಂಡಿದೆ. ಬಳಿಕ, ಬಾಕಿ ಇರುವ 17 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ್ ಅವರು ಕಂಪೆನಿಯ ಪ್ರತಿನಿಧಿಗಳಿಗೆ ತಿಳಿಸಿದರು.