ಬಬಲೇಶ್ವರ, ತಿಕೋಟಾ ಪಟ್ಟಣಗಳಿಗೆ ನೀರು ಪೂರೈಸಲು ಯೋಜನೆ : ಎಂ.ಬಿ.ಪಾಟೀಲ್

Update: 2024-11-05 17:29 GMT

ಬೆಂಗಳೂರು : ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನತೆಗೆ ಸದ್ಯ 55 ಎಲ್ಪಿಸಿಡಿ(ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್) ಕುಡಿಯುವ ನೀರು ಪೂರೈಸುತ್ತಿದ್ದು, ಅದನ್ನು 135 ಎಲ್ಪಿಸಿಡಿ ಗೆ ಹೆಚ್ಚಿಸುವ ಸಂಬಂಧ ಯೋಜನೆ ರೂಪಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳಿಗೆ 55 ಎಲ್ಪಿಸಿಡಿ ನೀರು ಸರಬರಾಜು ಆಗುತ್ತಿದೆ. ಸದ್ಯ ಈ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿರುವ ಕಾರಣ ಅದನ್ನು 135 ಎಲ್ಪಿಸಿಡಿ ಗೆ ಹೆಚ್ಚಿಸುತ್ತಿದ್ದು ಅಚ್ಚುಕಟ್ಟಾಗಿ ಯೋಜನೆ ಜಾರಿ ಮಾಡಬೇಕು ಎಂದರು.

ವಿಜಯಪುರ ಜಿಲ್ಲೆಯ ಚಡಚಣ, ಆಲಮೇಲ, ಮುದ್ದೇಬಿಹಾಳ, ನಾಲತವಾಡ, ಸಿಂದಗಿ ಮತ್ತು ತಾಳಿಕೋಟೆಗಳಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಇದರ ಜೊತೆಗೆ ಮುದ್ದೇಬಿಹಾಳ(17.45 ಕೋಟಿ ರೂ.), ಸಿಂದಗಿ(26.53 ಕೋಟಿ ರೂ.) ಬಸವನಬಾಗೇವಾಡಿ (14.58 ಕೋಟಿ ರೂ.) ಪಟ್ಟಣಗಳ ನೀರು ಸರಬರಾಜು ಜಾಲ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ತ್ವರಿತವಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು ಎಂದು ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ಹಣಕಾಸು ಇಲಾಖೆ ಮುಖ್ಯಸ್ಥ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ನಾಗೇಂದ್ರ ಪ್ರಸಾದ ಹಾಜರಿದ್ದರು. ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮತ್ತು ಜಿಪಂ ಸಿಇಒ ರಿಷಿ ಆನಂದ ಅವರು ವರ್ಚುವಲ್ ಮೂಲಕ ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News