ಕಾಂಗ್ರೆಸ್ ಉಸ್ತುವಾರಿಗಳು ಉಪಚುನಾವಣೆಗೆ ಕೊಳ್ಳೆ ಹೊಡೆದ ಹಣ ಬಳಸುವ ಆತಂಕ : ಡಿ.ವಿ.ಸದಾನಂದಗೌಡ
ಬೆಂಗಳೂರು : ಉಪಚುನಾವಣೆಯ ಹೊಣೆ ಹೊತ್ತಿರುವ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ ಮೂರು ಕ್ಷೇತ್ರಗಳಲ್ಲಿ ಬಳಸುವ ಪ್ರಯತ್ನದಲ್ಲಿರುವುದು ಗಮನಕ್ಕೆ ಬಂದಿದೆ. ಚುನಾವಣಾ ಆಯುಕ್ತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಗ್ರಹಿಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯಲು ಕಾಂಗ್ರೆಸ್ ಪಕ್ಷದ ಮೂವರು ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದಿಂದ ಸಂಡೂರಿ ಕ್ಷೇತ್ರದಲ್ಲಿ ಚುನಾವಣೆ ಉಸ್ತುವಾರಿಯಾಗಿರುವ ಬಿ.ನಾಗೇಂದ್ರ, ಶಿಗ್ಗಾಂವಿ ಉಸ್ತುವಾರಿಯಾಗಿರುವ ಝಮೀರ್ ಅಹ್ಮದ್ ಹಾಗೂ ಚನ್ನಪಟ್ಟಣದ ಉಸ್ತುವಾರಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ಮೇಲೆ ಅನುಮಾನವಿದೆ. ಇವರ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ನಿಗಾ ಇಲ್ಲದಿದ್ದರೆ, ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು, ಎನ್‌ಡಿಎ ಪ್ರಾಮಾಣಿಕ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸದಾನಂದಗೌಡ ಹೇಳಿದರು.
ಚುನಾವಣಾ ಆಯೋಗ ಒಂದುವೇಳೆ ಈ ಉಸ್ತುವಾರಿಗಳ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸದೆ ಇದ್ದಲ್ಲಿ, ಸಾಮಾನ್ಯ ಜನರ ಮೇಲೆ ಗಂಭೀರ ಪ್ರಭಾವ ಬೀರಬಹುದು ಎಂದು ಸದಾನಂದಗೌಡ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕು.ಸುರಭಿ ಹೊದಿಗೆರೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಶ್ರೀನಾಥ್ ಇದ್ದರು.