ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್, ವೆಬ್ ಸೈಟ್ ಬಿಡುಗಡೆ

Update: 2023-10-03 11:05 GMT

ಮೈಸೂರು,ಅ.3: ವಿಶ್ವವಿಖ್ಯಾತ ಮೈಸೂರು ದಸರಾ-2023 ರ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಹಾಗು ವೆಬ್ ಸೈಟ್ ಅನ್ನು ಬಿಡುಗಡೆಗೊಳಿಸಲಾಯಿತು.

ನಗರದ ಅರಮನೆ ಮಂಡಳಿ ಕಚೇರಿ ಆವರಣದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧಿಕೃತವಾಗಿ ಚಾಲನೆ ನೀಡಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿತ್ತು. ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿರುವುದರಿಂದ ಅದ್ದೂರಿಯೂ ಅಲ್ಲದ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ದಸರಾ ಉದ್ಘಾಟನೆಯನ್ನು ಖ್ಯಾತ ಸಂಗೀತ ನಿರ್ದೇಶ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದು, ಅಂದೇ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಯುವ ದಸರಾ, ಯವ ಸಂಭ್ರಮ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ವೈಭವ, ಮಹಿಳಾ ದಸರಾ, ರೈತರಿಗೆ ಅನುಕೂಲ ಉಂಟಾಗುವಂತಹ ಕಾರ್ಯಕ್ರಮ, ಆಹಾರ ಮೇಳಾ, ದೀಪಲಂಕಾರ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂದೇ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಶಾಂತಿ ಸೌರ್ಹದತೆ ಬಿಂಬಿಸುವ, ಸಂವಿಧಾನದ ಬಗ್ಗೆ ಅರಿವು ಮೂಡಿಸಿ ಯುವಕರಿಗೆ ಉತ್ತಮ ಸಂದೇಶ ಸಾರುವಂತಹ ಸಾಮಾಜಿಕ ಕಳಕಳಿಯ ಸ್ಥಬ್ಧ ಚಿತ್ರಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.

ದಸರಾಗೆ ಸಂಬಂಧಪಟ್ಟಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗಾಗಲೇ 15 ಕೋಟಿ. ರೂ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ದಸರಾಗೆ ಖರ್ಚು ಮಾಡಿದ ಹಣಕ್ಕಿಂತ ಕಡಿಮೆ ವೆಚ್ಚದಲ್ಲಿ ಈ ಬಾರಿ ದಸರಾ ಆಚರಣೆ ಮಾಡಲಾಗುವುದು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ದಸರಾದಲ್ಲಿ ನಡೆಯುವ ಎಲ್ಲಾ ಸಾಂಸ್ಜೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರಿಗೆ ಹೆಚ್ಚು ಕಲ್ಪಿಸಲಾಗಿದೆ. ಹಾಗೆ ಹೊರಗಿನವರಿಗೂ ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಳಾ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಅಸಾದ್ ಶರೀಫ್ ಉರ್ ರಹ್ಮಾನ್, ಪೊಲೀಸ್ ಅಕಾಡೆಮಿ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸವಿತಾ, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು. 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News