ದಸರಾ ಆನೆಗಳ ತೂಕ ಪರೀಕ್ಷೆ: ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯುವಿನ ತೂಕ ಎಷ್ಟು?
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ 'ಅಭಿಮನ್ಯು' ನೇತೃತ್ವದ ಆನೆಗಳ ತೂಕ ಪರೀಕ್ಷೆ ಬುಧವಾರ ನಗರದ ಧನ್ವಂತರಿ ರಸ್ತೆಯಲ್ಲಿರುವ 'ಎಲೆಕ್ಟ್ರಾನಿಕ್ ವೇಬ್ರಿಡ್ಜ್'ನಲ್ಲಿ ನಡೆಯಿತು.
750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ 'ಕ್ಯಾಪ್ಟನ್' ಅಭಿಮನ್ಯು ಆನೆ 5,160 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕದ ಅನೆಯಾಗಿ ಹೊರಹೊಮ್ಮಿದ್ದಾನೆ.
ಕಳೆದ ವರ್ಷದ ತೂಕ ಪರೀಕ್ಷೆಯಲ್ಲಿ ‘ಅಭಿಮನ್ಯು’ 4,770 ಕೆ.ಜಿ ಭಾರವಿದ್ದು, ಆಗ ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿತ್ತು. ಅರ್ಜುನ, ಗೋಪಾಲಸ್ವಾಮಿ, ಧನಂಜಯ ಮೊದಲ ಮೂರು ಸ್ಥಾನದಲ್ಲಿದ್ದರು. ಇವರಲ್ಲಿ ‘ಗೋಪಾಲಸ್ವಾಮಿ’ ಕಳೆದ ವರ್ಷ ಕಾಡಾನೆ ಕಾಳಗದಲ್ಲಿ ಮೃತಪಟ್ಟಿದ್ದಾನೆ. ಧನಂಜಯ ಈ ಬಾರಿಯ ದಸರೆಯಲ್ಲೂ ಭಾಗವಹಿಸಿದ್ದು, 4,940 ಕೆ.ಜಿ ಭಾರವಿದ್ದಾನೆ.
ಆನೆಗಳ ತೂಕ ವಿವಿರ:
ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು - 5,160 ಕೆ.ಜಿ ತೂಕದ ಮೂಲಕ ಬಲಶಾಲಿ ಎನಿಸಿಕೊಂಡಿದ್ದಾನೆ. ಉಳಿದಂತೆ ವಿಜಯ-2,830 ಕೆ ಜಿ, ಭೀಮ - 4,370 ಕೆ.ಜಿ, ವರಲಕ್ಷ್ಮಿ- 3,020 ಕೆ.ಜಿ, ಮಹೇಂದ್ರ - 4,530 ಕೆ.ಜಿ, ಧನಂಜಯ - 4,940 ಕೆ.ಜಿ, ಕಂಜನ್ - 4,240 ಕೆ.ಜಿ, ಗೋಪಿ - 5,080 ಕೆ.ಜಿ ತೂಕ ಇವೆ ಎನ್ನುವುದು ತಿಳಿದು ಬಂದಿದೆ.