ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಸಿದಿಲ್ಲ: ಬಸವರಾಜ ರಾಯರೆಡ್ಡಿ
ಕೊಪ್ಪಳ್ಳ: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಸಿದಿಲ್ಲ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಕೋಟಿ ತೊಂಬತ್ತು ಲಕ್ಷ ಜನರಿಗೆ ಬರೊಬ್ಬರಿ ಒಂದು ಲಕ್ಷ ಕೋಟಿ ಹಣ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು 96 ಲಕ್ಷ ಕೋಟಿ ಹಣ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದು ತಪ್ಪಲ್ಲ ಎಂದು ಹೇಳಿದರು.
ಈ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದ ಅವರು, ಲೋಕಸಭಾ ಚುನಾವಣೆ ಹಾಗೂ ಮುಂದಿನ ಚುನಾವಣೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಇರುತ್ತವೆ. ಗ್ಯಾರಂಟಿಯಿಂದ ಹಣದ ಬಾರವಿದೆ. ಆದರೆ ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ನೈತಿಕತೆ ಮೌಲ್ಯ ಇಲ್ಲ:
ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ನೀಡದೆ ಇದ್ದಾಗ ನಮ್ಮ ಪಕ್ಷಕ್ಕೆ ಬರಬಾರದಿತ್ತು, ಬಂದ ಮೇಲೆ ಮರಳಿ ಹೋಗಬಾರದಿತ್ತು. ಕಾಂಗ್ರೆಸ್‍ಗೆ ಅವರು ಬಂದಿದ್ದು ಆತುರದ ನಿರ್ಧಾರ, ಈಗ ಹೋಗಿದ್ದು ಆತುರದ ನಿರ್ಧಾರವಾಗಿದೆ. ಜತೆಗೆ ಬಿಜೆಪಿ ಪಕ್ಷಕ್ಕೆ ನೈತಿಕತೆ ಇಲ್ಲವೇ ಇಲ್ಲ ಎಂದು ಬಸವರಾಜ್ ರಾಯರೆಡ್ಡಿ ಹೇಳಿದರು.