ಈಡಿಗ ಸಂಘದ ಸಮಾವೇಶ ರಾಜಕೀಯ ಪ್ರೇರಿತ, ನಾನು ಭಾಗಿಯಾಗಲ್ಲ: ಬಿ.ಕೆ.ಹರಿಪ್ರಸಾದ್

Update: 2023-12-09 16:54 GMT

ಹುಬ್ಬಳ್ಳಿ, ಡಿ.9: ಬೆಂಗಳೂರಿನಲ್ಲಿ ನಡೆಯುತ್ತಿರುವ ಈಡಿಗ ಸಂಘದ ಸಮಾವೇಶ ರಾಜಕೀಯ ಪ್ರೇರಿತ, ಅದರಲ್ಲಿ ನಾನು ಭಾಗಿಯಾಗಲ್ಲ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರು ತೀರ್ಮಾನಿಸುತ್ತಾರೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ಬಾಲ್ ರೀತಿಯಲ್ಲಿ ತುಳಿದಷ್ಟು ಮೇಲೆ ಪುಟಿಯುತ್ತೇನೆ ಎಂದರು.

ರಾಜಕೀಯ ಕುತಂತ್ರದಿಂದ ಈಡಿಗರ ಸಮಾವೇಶ ಆಯೋಜನೆ ಮಾಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭಾಗಿಯಾಗುತ್ತಿದ್ದಾರೆ. ಆದರೆ ನಾನು ಈ ಸಮಾವೇಶಕ್ಕೆ ಹೋಗುತ್ತಿಲ್ಲ. ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವೆ. ಈಡಿಗ ಸಮಾಜದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಇದೆ. ಆದರೆ ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ ಎಂದು ಅವರು ಹೇಳಿದರು.

ಸಂಘದ 75 ವರ್ಷಗಳ ಅಮೃತ ಮಹೋತ್ಸವ ಅಂತ ಹೇಳುತ್ತಾರೆ. ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಯಾವಾಗ ಮಾಡಿದ್ದರು ಎಂದು ಗೊತ್ತಿಲ್ಲ. ಸೇಂದಿ, ಸಾರಾಯಿ ನಿಷೇಧ ಆದಾಗ ಈ ಸಂಘದಲ್ಲಿ ಇದ್ದವರು ಏನು ಮಾಡಲಿಲ್ಲ. ನಮ್ಮ ಸಮಾಜದ ಆರು ಸ್ವಾಮೀಜಿಗಳಿದ್ದಾರೆ. ಈ ಪೈಕಿ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಜನಗಣತಿ ವರದಿ ಅಂಗೀಕಾರಕ್ಕೆ ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಜನಗಣತಿಗೆ ಹಿಂದಿನಿಂದಲೂ ಪ್ರಬಲ ಜಾತಿಗಳು ವಿರೋಧ ಮಾಡುತ್ತಲೇ  ಬಂದಿವೆ. ಹಾವನೂರು ಆಯೋಗದ ವರದಿ ಬಂದಾಗ ಶಾಸಕರೊಬ್ಬರು ಅದರ ಪ್ರತಿಯನ್ನು ಸುಟ್ಟು ಹಾಕಿದ್ದರು.

ಆದರೆ, ಅಂದು ಮುಖ್ಯಮಂತ್ರಿ ದೇವರಾಜ ಅರಸು ವರದಿ ಜಾರಿಗೆ ತಂದಿದ್ದರು ಎಂದರು. ಹಿಂದುಳಿದ ವರ್ಗದಲ್ಲಿ ಎಷ್ಟೋ ಜಾತಿಗಳಿವೆ. ಆದರೆ ಮೀಸಲಾತಿ ಲಾಭ ಪಡೆಯುತ್ತಿರುವುದು ಮಾತ್ರ ಕೆಲವೇ ಜಾತಿಗಳು. ಹೀಗಾಗಿ ಅರಸು ಮಾದರಿಯಲ್ಲಿ ರಾಜ್ಯ ಸರಕಾರ ಜಾತಿ ಜನಗಣತಿ ವರದಿ ಅಂಗೀಕರಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.

ಆಪರೇಷನ್ ಕಮಲದಲ್ಲಿ ಬಿಜೆಪಿ ಮಾಸ್ಟರ್ ಡಿಗ್ರಿ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನವಾಗಲಿದೆ ಎಂದು ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ. ಅವರು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆಪರೇಷನ್ ಕಮಲದಲ್ಲಿ ಬಿಜೆಪಿಯವರು ಮಾಸ್ಟರ್ ಡಿಗ್ರಿ ತಗೊಂಡಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News