ಇಂದಿರಾಗಾಂಧಿ ಜಾರಿಗೊಳಿಸಿದ ʼತುರ್ತು ಪರಿಸ್ಥಿತಿʼ ಸಂವಿಧಾನ ಬಾಹಿರವಾಗಿರಲಿಲ್ಲ : ಬಿ.ಕೆ.ಹರಿಪ್ರಸಾದ್

Update: 2024-07-03 13:37 GMT

Screengrab : x/@INCKarnataka

ಬೆಂಗಳೂರು : ದೇಶದ ಆಂತರಿಕ ಕ್ಷೋಭೆಯನ್ನು ಹತ್ತಿಕ್ಕಲು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು. ಇದು ಸಂವಿಧಾನ ಬಾಹಿರವಾಗಿರಲಿಲ್ಲ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನೂತನ ಸರಕಾರ ರಚನೆ ವೇಳೆ ರಾಷ್ಟ್ರಪತಿಯವರು ಸಂಸತ್‍ನ ಜಂಟಿ ಅಧಿವೇಶನದಲ್ಲಿ ತಮ್ಮ ಭವಿಷ್ಯದ ಯೋಜನೆಗಳನ್ನು ಪ್ರಸ್ತಾಪಿಸಿ ವಿವರಣೆ ನೀಡುವುದು ಸಾಮಾನ್ಯ. ಆದರೆ, ಈ ಬಾರಿ ನರೇಂದ್ರ ಮೋದಿಯವರ ಸರಕಾರ ರಾಷ್ಟ್ರಪತಿಯವರಿಂದ ಮಾಡಿಸಿರುವ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪ ಮಾಡಿರುವುದು ಖಂಡನೀಯ" ಎಂದರು.

ದೇಶದ ಒಳಗೆ ಮತ್ತು ಹೊರಗೆ ರಾಷ್ಟ್ರವಿರೋಧಿ ಶಕ್ತಿಗಳು ವಿಜೃಂಭಿಸಿದಾಗ ಸುರಕ್ಷತಾ ದೃಷ್ಟಿಯಿಂದ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶವಿದೆ. ಹೀಗಾಗಿ ಇಂದಿರಾಗಾಂಧಿಯವರು ಜಾರಿಗೊಳಿಸಿದ ತುರ್ತುಪರಿಸ್ಥಿತಿ ಸಂವಿಧಾನಬಾಹಿರವಲ್ಲ. ತುರ್ತುಪರಿಸ್ಥಿತಿಯನ್ನು ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶ ಎಂದು ಅವರು ಸಮರ್ಥಿಸಿಕೊಂಡರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಸಮಾಜಘಾತುಕ ಶಕ್ತಿಗಳು, ಕಳ್ಳ ಸಾಗಣಿಕೆದಾರರು, ರಾಷ್ಟ್ರದ ಸಂವಿಧಾನವನ್ನು ಬುಡಮೇಲು ಮಾಡಲು ಯತ್ನಿಸಿದವರನ್ನು ಜೈಲಿಗೆ ಹಾಕಲಾಗಿತ್ತು. ಆದರೆ, ಈಗಿನ ಕೇಂದ್ರ ಸರಕಾರ ವಿವಿಧ ರಾಜ್ಯದ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದೆ. ವಿಪಕ್ಷ ನಾಯಕರ ಮೇಲೆ ಹಗೆತನ ಸಾಧಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು. ಈಗ ಕೇಂದ್ರ ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದು ಎಲ್ಲರ ಕಣ್ಣೆದುರಿಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿ ಹೇರಿದ್ದರಲ್ಲಿ ತಪ್ಪಿಲ್ಲ. ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡುತ್ತದೆ. ತೀರ್ಪು ನೀಡಿದ ನ್ಯಾಯಾಧೀಶರು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು 7 ವಾರಗಳ ಕಾಲಾವಕಾಶ ನೀಡಿದರು. ಸುಪ್ರೀಂಕೋರ್ಟ್ ಕೂಡ ಇಂದಿರಾ ಗಾಂಧಿಯವರನ್ನು ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಜಯಪ್ರಕಾಶ್ ನಾರಾಯಣ್ ಅವರು ಇಂದಿರಾಗಾಂಧಿಯವರ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ನಡೆಸುವ ಬದಲಾಗಿ ಸೇನೆ ಹಾಗೂ ಇತರ ಸಶಸ್ತ್ರ ಪಡೆಗಳಿಗೆ ದಂಗೆ ಏಳಲು ಕರೆ ನೀಡುತ್ತಾರೆ. ಹೀಗಾಗಿ ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಹೇರಬೇಕಾಗುತ್ತದೆ. ಕೊನೆಗೆ ಅದನ್ನು ಹಿಂದೆ ಪಡೆದಿದ್ದೂ ಕೂಡ ಇಂದಿರಾ ಗಾಂಧಿಯವರೇ ಎಂದು ಬಿ.ಕೆ.ಹರಿಪ್ರಸಾದ್ ವಿವರಿಸಿದರು.

ಇತ್ತೀಚೆಗೆ ಸಂಸತ್‍ನಲ್ಲಿ ರಾಹುಲ್‍ಗಾಂಧಿ ಮಾಡಿದ ಭಾಷಣವನ್ನು ಉಲ್ಲೇಖಿಸಿ ಮೋದಿಯವರು ಅವಹೇಳನ ಮಾಡಿದ್ದಾರೆ. ರಾಹುಲ್ ಅವರನ್ನು ಬಾಲಬುದ್ಧಿ, ಬಚ್ಚಾ ಎಂದಿದ್ದಾರೆ. ಈ ಮೂಲಕ ಮಕ್ಕಳನ್ನು ಅವಹೇಳನ ಮಾಡಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಂಡ ಪ್ರಧಾನಿ ಮೋದಿ..!

ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಇದು ಶೋಭೆ ತರುವುದಿಲ್ಲ. ತುರ್ತು ಪರಿಸ್ಥಿತಿಯ ಕುರಿತು ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News