ಬಾಹ್ಯಾಕಾಶ-ರಕ್ಷಣಾ ವಲಯದ ಸಮಗ್ರ ಅಭಿವೃದ್ಧಿಗೆ ಒತ್ತು: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ವಿದೇಶಿ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಬೇಕು. ಇದಕ್ಕಿಂತ ಮುಖ್ಯವಾಗಿ ತಯಾರಿಕೆ, ದುರಸ್ತಿ ಮತ್ತು ಓವರ್-ಹಾಲ್ (ಓಎಂಆರ್) ಸ್ಥಳೀಯವಾಗಿಯೇ ನಡೆಯುವಂತೆ ಆಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬುಧವಾರ ನಗರದಲ್ಲಿ ನಡೆದ ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಷನ್ ಗ್ರೂಪ್ ನ ಚೊಚ್ಚಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯಕ್ಕೆ ಈ ಪೈಕಿ ಶೇ.70ರಷ್ಟು ಕೆಲಸ ಹೊರದೇಶಗಳಲ್ಲೆ ನಡೆಯುತ್ತಿದೆ. ನಮ್ಮಲ್ಲಿ ಇದು ದುಬಾರಿ ವೆಚ್ಚದ ಬಾಬತ್ತಾಗಿರುವುದೇ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಆದ್ಯತೆ ಕೊಡಬೇಕಾಗಿದೆ ಎಂದರು.
ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಐಎಡಿಬಿ ವತಿಯಿಂದ ನಿರ್ಮಿಸಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ. ಇಲ್ಲಿ ಪೊಲೀಸ್ ಔಟ್-ಪೋಸ್ಟ್ ಆರಂಭಿಸುವ ಜೊತೆಗೆ ಈ ಪ್ರದೇಶದಲ್ಲಿ ಒಳ್ಳೆಯ ಶಾಲೆಗಳು, ಹೋಟೆಲ್ ಗಳು ಮತ್ತು ವಸತಿ ಸೌಲಭ್ಯಗಳು ಹೆಚ್ಚಾಗಿ ಬರುವಂತೆ ಗಮನ ಹರಿಸಬೇಕಾಗಿದೆ. ಬಂಡವಾಳ ಆಕರ್ಷಣೆಗೆ ಇದು ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಇದಲ್ಲದೆ, ಬಾಹ್ಯಾಕಾಶ ಕಂಪೆನಿಗಳಲ್ಲಿ ಕೆಲಸ ಮಾಡುವ ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಸೂಕ್ತ ವಸತಿ ಸೌಲಭ್ಯ (ಡಾರ್ಮೆಟರಿ) ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಕೆಐಎಡಿಬಿ ಇದಕ್ಕೆ ಜಾಗ ಒದಗಿಸಿಕೊಡಲು ತಕ್ಷಣವೇ ಪತ್ರ ವ್ಯವಹಾರ ನಡೆಸುವಂತೆ ಸಂಬಂಧಿಸಿದ ಇಲಾಖೆ, ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಎಂ.ಬಿ.ಪಾಟೀಲ್ ನುಡಿದರು.
ಸಿಂಗಾಪುರದಲ್ಲಿ ಜಗತ್ತಿನ ಅತ್ಯುತ್ತಮ ಇಂಡಸ್ಟ್ರಿಯಲ್ ಪಾರ್ಕುಗಳು ಇವೆ. ಆ ತರಹ ನಮ್ಮಲ್ಲೂ ಆಗಬೇಕು. ಇನ್ನು 10-15 ವರ್ಷಗಳಲ್ಲಿ ದೇಶಕ್ಕೆ ಇನ್ನೂ 1ಸಾವಿರ ನಾಗರಿಕ ವಿಮಾನಗಳು ಸೇರ್ಪಡೆಯಾಗಲಿವೆ. ಇಲ್ಲಿ ಬಹುದೊಡ್ಡ ಅವಕಾಶವಿದ್ದು, ರಾಜ್ಯವು ಇದನ್ನು ಸದುಪಯೋಗ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಉದ್ಯಮಿಗಳು ಹೂಡಿಕೆ ಮಾಡುವ ಜತೆಗೆ ಏನೇನಾಗಬೇಕು ಎಂಬ ಬಗ್ಗೆ ಸಲಹೆ ನೀಡಬೇಕು. ಜೊತೆಗೆ, ಕೇಂದ್ರ ಸರಕಾರದಿಂದ ಆಗಬೇಕಾದ ಕೆಲಸಗಳತ್ತಲೂ ಗಮನ ಹರಿಸಿ, ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು. ಸಚಿವರ ಮಾತಿಗೆ ಉದ್ಯಮಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಏರ್ ಬಸ್ ಇಂಡಿಯಾದ ನಿರ್ದೇಶಕ ಕೃತ್ತಿವಾಸನ್ ಮುಖರ್ಜಿ, ಆರ್.ಟಿ.ಎಕ್ಸ್ ಕಾಲಿನ್ಸ್ ಏರೋಸ್ಪೇಸ್ ಕಂಪೆನಿಯ ಮುಖ್ಯಸ್ಥ ಸಮಿತ್ ರಾಯ್, ಡೈನಾಮಿಕ್ ಟೆಕ್ನಾಲಜೀಸ್ ಲಿಮಿಟೆಡ್ ಸಿಇಒ ಉದ್ಯಂತ್ ಮಲ್ಹೋತ್ರ, ಬೋಯಿಂಗ್ ಇಂಡಿಯಾ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ ಪಾಲ್ಗೊಂಡಿದ್ದರು.
ಎಚ್‍ಎಎಲ್ ನಿರ್ದೇಶಕ ಜಯದೇವ್ ಮತ್ತು ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಖ್ಯಸ್ಥ ಅಪ್ಪಾರಾವ್ ವೆಂಕಟ ವಲ್ಲಾವರಪು ಆನ್‍ಲೈನ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.