ಕೈಗಾರಿಕೆಗಳಿಗೆ ಉತ್ತೇಜನ ಎಲ್ಲ ರಾಜ್ಯಗಳಿಗೂ ಸಮಾನವಾಗಿರಲಿ : ಎಂ.ಬಿ.ಪಾಟೀಲ್

Update: 2024-06-15 11:01 GMT

Photo : x/@MBPatil

ಬೆಂಗಳೂರು : ಗುಜರಾತಿನ ಸಾನಂದ್ ನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿರುವ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿ ಕಂಪನಿ ಸೃಷ್ಟಿಸಲಿರುವ ಪ್ರತೀ ಉದ್ಯೋಗಕ್ಕೆ ದೇಶದ ಬೊಕ್ಕಸದಿಂದ 3.20 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ಕೊಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿರುವುದು ಸರಿಯಾಗಿದೆ. ಇದೇ ನೀತಿ ಮುಂದುವರಿಯುವುದಾದರೆ, ದೇಶದ ಎಲ್ಲ ರಾಜ್ಯಗಳಿಗೂ ಇದೇ ರೀತಿಯ ಸಮಾನ ಸೂತ್ರ ಮತ್ತು ಅವಕಾಶ ಸಿಗಲಿ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಆಡಿರುವ ಮಾತುಗಳನ್ನು ಬೆಂಬಲಿಸಿ ಸಚಿವರು 'ಎಕ್ಸ್' ತಾಣದಲ್ಲಿ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಕ್ರಾನ್ ಕಂಪನಿ 2.70 ಬಿಲಿಯನ್ ಡಾಲರ್ ವೆಚ್ಚದಲ್ಲಿ ಗುಜರಾತಿನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, 5,000 ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದೆ. ಆದರೆ ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಶೇಕಡಾ 50 ಮತ್ತು ಗುಜರಾತ್ ಸರಕಾರದಿಂದ ಶೇಕಡ 20ರಷ್ಟು ಪ್ರೋತ್ಸಾಹ ಧನವನ್ನು ಅದು ಪಡೆಯುತ್ತಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸದಿಂದ ಕಂಪನಿಗೆ 2 ಬಿಲಿಯನ್ ಡಾಲರ್ ಸಂದಾಯ ಆಗುತ್ತಿದೆ. ಇದರ ಹಿಂದಿರುವ ತರ್ಕ ಸಮರ್ಥನೀಯವಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಕ್ಕೆ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್, 'ಇಷ್ಟೊಂದು ಭಾರೀ ಪ್ರಮಾಣದ ಪ್ರೋತ್ಸಾಹಕ ಧನವನ್ನು ಸರಕಾರದ ಬೊಕ್ಕಸದಿಂದಲೇ ನೀಡುತ್ತಿದ್ದರೆ ಇದನ್ನು ಸಾರ್ವಜನಿಕ ವಲಯದ ಉದ್ಯಮವೆಂದೇ ಪರಿಗಣಿಸಬಹುದು' ಎಂದೂ ಹೇಳಿದ್ದಾರೆ.

ಕೈಗಾರಿಕಾ ಬೆಳವಣಿಗೆಗೆ ಸೂಕ್ತವಾದ ಕಾರ್ಯ ಪರಿಸರ ಸೃಷ್ಟಿಸಲು ಈ ರೀತಿಯ ಪ್ರೋತ್ಸಾಹ ಧನ ನೀಡುತ್ತಿದ್ದರೆ ಅದು ಸ್ವಾಗತಾರ್ಹ. ಇದು ವಾಸ್ತವವಾಗಿದ್ದರೆ, ಎಲ್ಲ ರಾಜ್ಯಗಳಿಗೂ ಇಂತಹ ಸಮಾನ ಅವಕಾಶ ಸಿಗಬೇಕು. ಆಗ ಮಾತ್ರ ದೇಶದೆಲ್ಲೆಡೆ ಕೈಗಾರಿಕಾ ಬೆಳವಣಿಗೆ ಕಾಣಬಹುದು. ಆದರೆ ಕೇಂದ್ರದ ಈಗಿನ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತಿನ ಬಗ್ಗೆ ಮಾತ್ರ ವಿಶೇಷ ಒಲವನ್ನು ತೋರಿಸುವಂತಿದೆ. ಇದು ತಾರತಮ್ಯ ‌ಮತ್ತು ಅಸಮಾನತೆಗೆ ದಾರಿ ಮಾಡಿಕೊಡಲಿದೆ ಅಷ್ಟೇ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News