ಬಿಜೆಪಿಯಲ್ಲಿ ಮುಗಿಯದ ಭಿನ್ನಮತ| ಸುಧಾಕರ್ ನನಗೆ ಕರೆ ಮಾಡಿದ ದಾಖಲೆ ತೋರಿಸಿದರೆ ಈಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ: ಎಸ್​. ಆರ್​. ವಿಶ್ವನಾಥ್

Update: 2024-04-01 06:42 GMT

Photo: facebook

ಬೆಂಗಳೂರು: ತನ್ನನ್ನು ಭೇಟಿಯಾಗಲು ಬರುವುದಾಗಿ ಡಾ.ಕೆ.ಸುಧಾಕರ್ ತಿಳಿಸಿದ ಕರೆ, ಮೆಸೇಜ್‌ ಡೀಟೇಲ್ಸ್‌ ಗಳು ಏನಾದರೂ ಇದ್ದರೆ ಈಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್ ಅವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ʼರವಿವಾರ ಮನೆಗೆ ಹೋದರೂ ತನ್ನನ್ನು ಭೇಟಿಯಾಗಲಿಲ್ಲʼ ಎಂಬ ಡಾ.ಕೆ.ಸುಧಾಕರ್​ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ದಿನ ಒಳಗೆ ನನ್ನನ್ನು ಭೇಟಿಯಾಗುವುದಾಗಿ ಸುಧಾಕರ್‌ ಅವರು ಕರೆ ಅಥವಾ ಮೆಸೇಜ್‌ ಮಾಡಿದ್ದರೆ, ಅದರ ಡೀಟೇಲ್ಸ್‌ ಏನಾದರೂ ಸಲಕ್ಕಿದರೆ ಈ ಕ್ಷಣದಲ್ಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಅವರು ಹೇಳುವುದು ಸುಳ್ಳಾಗಿದ್ದರೆ ಏನು ಉತ್ತರಿಸುತ್ತಾರೆ ಎಂದು ನೋಡೋಣ ಎಂದು ಹೇಳಿದರು.

ನಮ್ಮ ನಾಯಕರಿಗೆ, ಜನರಿಗೆ ತಪ್ಪು ಸಂದೇಶ ಹೋಗಬಾರದು. ಈ ವಿಷಯದಲ್ಲಿ ಗಿಮಿಕ್‌ ಮಾಡೋದು ಬೇಡ. ಐದಾರು ದಿನಗಳ ಹಿಂದೆ ‌ʼವಿಶ್ವನ್ನ ನಾನು ನಿಮ್ಮನ್ನು ಭೇಟಿ ಮಾಡ್ಬೇಕು. ಸಮಯ ಕೊಡಿʼ ಅಂತ ಒಂದು ಮೆಸೇಜ್ ಅಂತ ಮಾಡಿದ್ದಾರೆ ಹೊರತು ಯಾವುದೇ ಕರೆ ಅಥವಾ ಮೆಸೇಜ್‌ ಮಾಡಿಲ್ಲ ಎಂದು ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

ವಿಶ್ವನಾಥ್‌ ಅವರು ತಮ್ಮ ಮಗನಿಗೆ ಟಿಕೆಟ್ ಸಿಗದಿರುವುದರಿಂದ ಬೇಸರದಲ್ಲಿದ್ದಾರೆ. ಅವರಿಗೆ ಹಲವು ಬಾರಿ ಪೋನ್‌, ಮೆಸೇಜ್‌ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಇಂದು ಅವರು ಸಿಂಗನಾಯಕನಹಳ್ಳಿಯ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ನೇರವಾಗಿ ಭೇಟಿ ಮಾಡಲು ಬಂದಿದ್ದೆ. ಆದರೆ, ಅವರು ಮನೆಯಲ್ಲಿ ಇಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ ಎಂದು ಡಾ.ಕೆ.ಸುಧಾಕರ್​ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News