ದ್ವೇಷ ರಾಜಕಾರಣ ಅಳಿಸಿ, ಪ್ರೀತಿಯ ಭಾರತವನ್ನು ಮರು ಸೃಷ್ಟಿಸಿ: ಸಿಎಂ ಸಿದ್ದರಾಮಯ್ಯ ಕರೆ

Update: 2023-07-26 15:46 GMT

ಯುವ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ- ಸಚಿನ್ ಪೈಲಟ್

ಬೆಂಗಳೂರು, ಜು.26: ‘ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಬೆಲೆ ಏರಿಕೆ ಕಾರಣದಿಂದ ಬಡವರು, ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿಯ ದ್ವೇಷ ರಾಜಕಾರಣ ಇಡೀ ದೇಶವನ್ನು ಆವರಿಸುತ್ತಿದೆ. ನಾವು ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಉತ್ತಮ ಭಾರತದ ಅಡಿಪಾಯ’ ರಾಷ್ಟ್ರೀಯ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ನಿರುದ್ಯೋಗ, ಬಡತನ ಹೆಚ್ಚಾಗುವಾಗಲೇ ದೇಶದಲ್ಲಿ ದ್ವೇಷವನ್ನು ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ ಎಂದು ದೂರಿದರು.

ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ ಮತ್ತು ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯ ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಸಮಾವೇಶ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ, ಆರೆಸೆಸ್ಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ. ದೇಶದ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ರೈತ, ಕಾರ್ಮಿಕ, ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನೇ ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

 

ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಬದ್ಧವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತ, ಶೂದ್ರರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರ ಬದುಕನ್ನು ಉನ್ನತೀಕರಿಸುವ ಮತ್ತು ಈ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಭಿಯಾನವನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ, ಹೋರಾಟ ನಡೆಸುತ್ತಿದೆ. ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವ ರಥ ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ. ಪ್ರಧಾನಿ ಮೋದಿಯವರು ಕೇವಲ 9 ವರ್ಷದಲ್ಲಿ 118ಲಕ್ಷ ಕೋಟಿ ರೂ.ಸಾಲ ಮಾಡಿ ದೇಶದ ಸಾಲವನ್ನು 170 ಲಕ್ಷ ಕೋಟಿ ರೂ.ಗೆ ಏರಿಸಿದ್ದಾರೆ. 75 ವರ್ಷಗಳಿಂದ ಇದ್ದ ದೇಶದ ಸಾಲ 53 ಲಕ್ಷ ಕೋಟಿ ರೂ. ಮಾತ್ರ. ಈ ಸಾಲವನ್ನು 170ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಕೀರ್ತಿ ಮೋದಿ ಮತ್ತು ಬಿಜೆಪಿ-ಆರೆಸೆಸ್ಸ್ ಪರಿವಾರದ್ದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಈ ಮಟ್ಟದ ಬೆಲೆ ಏರಿಕೆ ಮತ್ತು ಹಣದುಬ್ಬರ ಬಿಜೆಪಿ ಪರಿವಾರದ ಸಾಧನೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಕೆ ಆಗಲು ಮೋದಿ ಅವರ ತಲೆಕೆಳಗಾದ ಕೆಟ್ಟ ಆರ್ಥಿಕ ನೀತಿಗಳೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯ ಯುವ ಅಧ್ಯಕ್ಷ ನಲಪಾಡ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಸೇರಿ ಎಲ್ಲ ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

‘2024ರ ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು, ಈಗಿನಿಂದಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಬೇಕು. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಪ್ರತಿಬೂತ್ ಅನ್ನು ಡಿಜಿಟಲ್ ಮಾಡಿ, ಸಂಘಟನೆ ಮಾಡಿದರೆ ಹೊಸ ಭಾರತ ನಿರ್ಮಿಸಲು ಯುವ ಕಾಂಗ್ರೆಸಿಗರಿಗೆ ಸಾಧ್ಯ. ‘ಇಂಡಿಯಾ’ ಭಾರತವನ್ನು ರಕ್ಷಿಸುತ್ತಿದೆ, ನಾವು ಇಂಡಿಯಾವನ್ನು ರಕ್ಷಿಸುತ್ತೇವೆ. ಎಲ್ಲ ಆತಂಕಗಳಿಂದ ಹೊರಗೆ ತರುತ್ತೇವೆ ಎಂಬ ವಿಶ್ವಾಸವಿದೆ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News