ಖಾಸಗಿ ಭೂಮಿಯಾದರೂ ಕೃಷಿ ಭೂಮಿಗೆ ತೆರಳಲು ರೈತರಿಗೆ ಗ್ರಾಮ ನಕಾಶೆಯಲ್ಲಿರುವಂತೆ ದಾರಿ ಬಿಡುವುದು ಕಡ್ಡಾಯ; ರಾಜ್ಯ ಸರಕಾರದ ಸುತ್ತೋಲೆ

Update: 2023-10-21 15:48 GMT

Photo Credit  - Twitter@KarnatakaVarthe 

ಬೆಂಗಳೂರು, ಅ.21: ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಸೌಲಭ್ಯ ಒದಗಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ರೈತರು ವ್ಯವಸಾಯದ ಉದ್ದೇಶಕ್ಕಾಗಿ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ದಾರಿ ಸಮಸ್ಯೆಯಿಂದಾಗಿ ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದಾಗ್ಯೂ ಕೆಲವು ಭೂ ಮಾಲಕರು ಅಡ್ಡಿಪಡಿಸುತ್ತಿರುವುದು, ಅಂತಹ ಜಾಗಗಳನ್ನು ಮುಚ್ಚಿರುವುದು, ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು ರೈತರ ಮಧ್ಯದ ವೈಯಕ್ತಿಕ ದ್ವೇಷ, ಅಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಬಳಕೆದಾರ ರೈತರ ತೊಂದರೆ ಅನುಭವಿಸುತ್ತಿರುವ ಪ್ರಕರಣಗಳು ಕಂಡು ಬರುತ್ತವೆ.

ಆದುದರಿಂದ, ತಹಶೀಲ್ದಾರ್ ಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮ ವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News