DCM ಡಿಕೆಶಿ ಬಹಳ ಆವೇಶದಲ್ಲಿದ್ದಾರೆ; ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ: ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ''ಡೂಪ್ಲಿಕೇಟ್ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ! ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
''ಎಚ್.ಡಿ.ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? '' ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಕುಮಾರಸ್ವಾಮಿ ಅವರು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
''ಎಚ್.ಡಿ.ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ'' ಎಂದು ಹೇಳಿದ್ದಾರೆ.
''ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಇರುತ್ತವೆ. ಇದು ಗೊತ್ತಿಲ್ಲದಷ್ಟು ಅಜ್ಞಾನವೇ? ಪ್ರಶ್ನೆ ಮಾಡಬೇಕು ಎಂತಲೇ ಜನ ನನ್ನನ್ನು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ. ಇವರನ್ನು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ'' ಎಂದು ಟೀಕಿಸಿದ್ದಾರೆ.
''ಪಂಚರತ್ನಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ರೂಪಿಸಿದ್ದ ಪಂಚಸೂತ್ರಗಳು. ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ಶಾಶ್ವತ ʼಆರ್ಥಿಕವೈಕಲ್ಯʼರನ್ನಾಗಿಸುವ ತಾತ್ಕಾಲಿಕ ತಂತ್ರಗಳಷ್ಟೇ. 75 ವರ್ಷಗಳಿಂದಲೂ ಇದನ್ನೇ ಮಾಡಿದೆ. ಜನರ ಕೈಲಿ ಭಿಕ್ಷಾಪಾತ್ರೆ ಇದ್ದರೆ, ವೋಟಿನ ಜೋಳಿಗೆ ಭರ್ತಿ ಆಗುತ್ತದೆ ಎನ್ನುವ ದುಷ್ಟಬುದ್ಧಿ ಇವರದ್ದು. ಜನರು ಸ್ವಾವಲಂಭಿಗಳಾಗಿ ಗೌರವಯುತ ಜೀವನ ನಡೆಸಬೇಕು ಎನ್ನುವ ಹಂಬಲ ನನ್ನದಾಗಿತ್ತು. ಡೂಪ್ಲಿಕೇಟ್ ಸಿಎಂ ಸಹೋದ್ಯೋಗಿ ಸಚಿವರೊಬ್ಬರೇ ಹೇಳಿದ್ದರಲ್ಲ; “ಎಲೆಕ್ಷನ್ ಗೆಲ್ಲಬೇಕಾದರೆ ಗ್ಯಾರಂಟಿಗಳಂಥ ಚೀಫ್ ಗಿಮಿಕ್ ಮಾಡಲೇಬೇಕು” ಎಂದು. ಗ್ಯಾರಂಟಿಗಳು ಚೀಫ್ ಗಿಮಿಕ್ ಎನ್ನುವ ಆ ಸಚಿವರ ಮಾತಿಗೆ ನನ್ನ ಸಹಮತವಿದೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
''ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ? ಹೊರಡಿಸಿ ಶ್ವೇತಪತ್ರವನ್ನು. ಬನ್ನಿ ಚರ್ಚೆಗೆ, ನಾನು ತಯಾರಿದ್ದೇನೆ. ಅಧಿವೇಶನದಲ್ಲೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ, ಉತ್ತರಿಸಿ. ಚನ್ನಪಟ್ಟಣದ ನನ್ನ ಜನರೂ ಮಾಹಿತಿ ನೀಡಿದ್ದಾರೆ, ರಾಜ್ಯದ ಉಳಿದ 223 ಕ್ಷೇತ್ರಗಳ ಜನರು ಕೊಟ್ಟ ವಿವರವೂ ನನ್ನಲ್ಲಿದೆ. ನೀವು ಒಳಗೊಳಗೆ ಮಾಡುತ್ತಿರುವ ಗಿಲೀಟುಗಳ ಮಾಹಿತಿಯೂ ಇದೆ. ಚರ್ಚೆ ಮಾಡೋಣಂತೆ'' ಎಂದು ಸವಾಲು ಹಾಕಿದ್ದಾರೆ.
''ಇವರ ರಾಜಕೀಯ ಸ್ವಾರ್ಥಕ್ಕೆ ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳನ್ನು ಬಲಿಗೊಟ್ಟು, ʼರಾಮನಗರʼ ಹೆಸರಿಗೇ ಕೊಕ್ ಕೊಡಲು ಹೊರಟಿದ್ದಾರೆ. ಆಯ್ಯೋ ದೇವೆರೇ, ಕಾಂಗ್ರೆಸ್ ಸರಕಾರದಲ್ಲಿ ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ'' ಎಂದು ಆರೋಪಿಸಿದ್ದಾರೆ.