ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ 1 ವರ್ಷ ಕಡ್ಡಾಯ ಸೇವೆಗೆ ವಿನಾಯಿತಿ; ಸಂಪುಟ ನಿರ್ಧಾರ
ಬೆಂಗಳೂರು, ಅ.19: ರಾಜ್ಯದಲ್ಲಿ ಎಂಬಿಬಿಎಸ್ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಒಂದು ವರ್ಷ ಕಡ್ಡಾಯ ಸರಕಾರಿ ಸೇವೆಯನ್ನು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಿತಿಗೊಳಿಸಿ, ಕೌನ್ಸ್ಸಿಲಿಂಗ್ ಮೂಲಕ ಮೆರಿಟ್ ಆಧಾರದಲ್ಲಿ ನಿಯೋಜಿಸಲು ಕಡ್ಡಾಯ ಸೇವಾ ತರಬೇತಿ ಅಧಿನಿಯಮ 2012ರ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಈ ಹಿನ್ನೆಲೆಯಲ್ಲಿ ‘ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ(ತಿದ್ದುಪಡಿ)ವಿಧೇಯಕ, 2023’ಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
2012ರ ಅಧಿನಿಯಮ ಮತ್ತು 2015ರ ನಿಯಮಗಳನ್ವಯ ಎಂಬಿಬಿಎಸ್ ಮತ್ತು ಮೆಡಿಕಲ್ ಪಿ.ಜಿ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿಸುವ ನಿಯಮವಿತ್ತು. 2023-24ನೆ ಸಾಲಿನಲ್ಲಿ 3251 ಎಂಬಿಬಿಎಸ್ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಆದರೆ ಈಗ ಕೇವಲ 1897 ಹುದ್ದೆಗಳು ಖಾಲಿ ಇವೆ ಎಂದು ಅವರು ಮಾಹಿತಿ ನೀಡಿದರು.
1354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಇದರಿಂದ 101.82 ಕೋಟಿ ರೂ.ಹೆಚ್ಚು ವೆಚ್ಚವಾಗುತ್ತದೆ. 2023-24ನೆ ಸಾಲಿನಲ್ಲಿ 3515 ಪಿಜಿ ಅಭ್ಯರ್ಥಿಗಳು ನೊಂದಾಯಿತರಾಗಿದ್ದಾರೆ. ಆದರೆ ಕೇವಲ 1270 ಹುದ್ದೆಗಳು ಖಾಲಿ ಇವೆ. ಹೆಚ್ಚುವರಿಯಾಗಿ 2245 ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಇದರಿಂದ 188.58 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
11 ಪೊಲೀಸ್ ತರಬೇತಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು 20 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳುವ ಮೂಲಕ ಈ ತರಬೇತಿ ಶಾಲೆಗಳ ಬಲವರ್ಧನೆ ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.