ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ಬಜೆಟ್ ಮಂಡಿಸಿದ್ದಾರೆ: ಬೊಮ್ಮಾಯಿ ಟೀಕೆ

Update: 2024-02-16 11:10 GMT

ಬೆಂಗಳೂರು: ‘ದಾಖಲೆಯ ಹದಿನೈದನೆ ಬಜೆಟ್ ಮಂಡಿಸಿ 1.5ಲಕ್ಷ ಕೋಟಿ ರೂ.ಸಾಲ ಮಾಡಿರುವ ದಾಖಲೆ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶುಕ್ರವಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಕೇಂದ್ರ ಸರಕಾರವನ್ನು ವಿರೋಧಿಸಲು ಬಜೆಟ್ ಅನ್ನು ಬಳಸಿಕೊಂಡಿದ್ದಾರೆ. ಆ ಮೂಲಕ ಬಜೆಟ್‍ನ ಪಾವಿತ್ರ್ಯತೆಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರದ ಅನುದಾನ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್‍ಟಿ ಕೌನ್ಸಿಲ್ ಇದೆ. ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್‍ನಲ್ಲಿ ಕೇಂದ್ರವನ್ನು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕೆ ಎಂದು ದೂರಿದರು.

ತೆರಿಗೆ ಸಂಗ್ರಹದಲ್ಲಿಯೂ 14ಸಾವಿರ ಕೋಟಿ ರೂ.ಕೊರತೆಯಾಗಿದೆ. ಅವರೇ ಹೇಳಿರುವಂತೆ 1.75ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದರು. ಆದರೆ ಕೇವಲ 1.61ಲಕ್ಷ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ 14ಕೋಟಿ ರೂ.ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಕೇಂದ್ರದಿಂದ ಬರುವ ಅನುದಾನ ಸಂಪೂರ್ಣ ಬಂದಿದೆ ಎಂದು ಅವರು ನುಡಿದರು.

‘ಲೋಕಸಭೆ ಚುನಾವಣೆಗೋಸ್ಕರ ಕೇಂದ್ರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಕೃಷ್ಣಾ, ಭದ್ರಾ, ಮಹಾದಾಯಿ ಯೋಜನೆಗಳಿಗೆ ಯಾವುದೇ ಹಣ ನೀಡಿಲ್ಲ. ನೀರಾವರಿಗೆ ಸಂಪೂರ್ಣ ಅನ್ಯಾಯ ಮಾಡಿದ್ದಾರೆ. ಎಸ್ಸಿ-ಎಸ್ಟಿಗಳಿಗೆ ಮೋಸದ ಬಜೆಟ್, ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ ಶೂನ್ಯ ಬಜೆಟ್ ಆಗಿದೆ. ಪ್ರತಿಪಕ್ಷ ಸಭಾತ್ಯಾಗ ಮಾಡುವ ಸ್ಥಿತಿಗೆ ರಾಜ್ಯ ಸರಕಾರ ಬಂದಿದೆ. ಸರಕಾರದ ಜನವಿರೋಧಿ ನೀತಿಯನ್ನು ಜನರಿಗೆ ತಲುಪಿಸುತ್ತೇವೆ’

ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News