ಸುಳ್ಳು ಜಾತಿ ಪ್ರಮಾಣಪತ್ರ: ಮಾಜಿ ಶಾಸಕ ಮಂಜುನಾಥ್ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ 2013ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು(ಪರಿಶಿಷ್ಟ ಜಾತಿಗೆ ಮೀಸಲು) ಕ್ಷೇತ್ರದಿಂದ ಜಿ.ಮಂಜುನಾಥ್(ಕೊತ್ತೂರು ಮಂಜುನಾಥ್) ಅವರು ಆಯ್ಕೆಯಾಗುವ ಮೂಲಕ ಪರಿಶಿಷ್ಟ ಜಾತಿಗಳ ವರ್ಗಕ್ಕೆ ವಂಚಿಸಿದ್ದಾರೆ ಎಂದು ತಿಳಿಸಿರುವ ಹೈಕೋರ್ಟ್, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಅರ್ಜಿದಾರರು ಶಾಸಕರಾಗಿದ್ದೂ, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಕ್ಷೇತ್ರವನ್ನು ಕಸಿದುಕೊಂಡಿದ್ದಾರೆ. ಈ ಪ್ರಕ್ರಿಯೆಯು ಸಂವಿಧಾನಕ್ಕೆ ಎಸಗಿದ ಮೋಸವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ಯಾವ ಕ್ರಮ ಕೈಗೊಳ್ಳಬೇಕು ಎಂಬ ಅಂಶ ಸರಕಾರಕ್ಕೆ ಬಿಟ್ಟಿದ್ದಾಗಿದೆ ಎಂದು ಹೇಳಿದೆ.
2021ರ ಅ.27ರಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವರದಿಯ ಸಿಂಧುತ್ವವನ್ನು ಪ್ರಶ್ನಿಸಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ವರದಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಜಾತಿ ಪರಿಶೀಲನಾ ಸಮಿತಿಯು ಮಂಜುನಾಥ್ ಅವರು ಪರಿಶಿಷ್ಟ ಜಾತಿಗೆ ಸೇರಿದ ಬುಡಗ ಜಂಗಮ ಜಾತಿಗೆ ಸೇರಿದವರಲ್ಲ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಭೈರಾಗಿ ಜಾತಿಗೆ ಸೇರಿದವರು ಎಂದು ವರದಿ ನೀಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಗೆಜಿಟಿಯರ್ ನಲ್ಲಿ ಬುಡಗ ಜಂಗಮ ಜಾತಿಯನ್ನು ಮಾಲಾನ್ಯಾಸಿ, ಭೈರಾಗಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಆದರೆ, ಅರ್ಜಿದಾರ ಮಂಜುನಾಥ್ ಅವರ ಸಂಬಂಧಿಕರು ಇತ್ತೀಚಿನ ದಿನಗಳಲ್ಲಿ ಬುಡಗ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿಲ್ಲ ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ತನಿಖೆಯಲ್ಲಿ ತಿಳಿದು ಬಂದಿತ್ತು.
ಪ್ರಕರಣವೇನು?: ಅರ್ಜಿದಾರ ಮಂಜುನಾಥ್ ಅವರು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2013ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಅಲ್ಲದೆ, ಅವರು ಬುಡಗ ಜಂಗಮ ಜಾತಿಗೆ ಸೇರಿದವರು ಎಂಬುದನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು 2018ರ ಎಪ್ರಿಲ್‍ನಲ್ಲಿ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಂಜುನಾಥ್ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರ ಪರಿಶೀಲನೆಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ವಹಿಸಿತ್ತು. ಅಲ್ಲದೆ, ವರದಿ ತನ್ನ ವಿರುದ್ಧ ಬಂದಲ್ಲಿ ಹೈಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದಂತೆ ವಿಚಾರಣೆ ನಡೆಸಿದ್ದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ 2021ರ ಅ.27ರಂದು ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಫಲಿತಾಂಶ ಮಂಜುನಾಥ್ ಅವರಿಗೆ ವಿರುದ್ಧವಾಗಿತ್ತು. ಹೀಗಾಗಿ ಈ ವರದಿಯನ್ನು ಪ್ರಶ್ನಿಸಿ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.