ʼಗೃಹಲಕ್ಷ್ಮಿ ಯೋಜನೆʼ ಬಗ್ಗೆ ಸುಳ್ಳಿನ ಜಾಹೀರಾತು : ಪ್ರಧಾನಿ ಕ್ಷಮೆಯಾಚನೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ

Update: 2024-11-07 13:38 GMT

ಸಿದ್ದರಾಮಯ್ಯ/ನರೇಂದ್ರ ಮೋದಿ(PTI)

ಬೆಂಗಳೂರು : ರಾಜ್ಯ ಸರಕಾರದ ಗೃಹ ಲಕ್ಷ್ಮಿ ಯೋಜನೆ ಕುರಿತು ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸುಳ್ಳೇ ಬಿಜೆಪಿಯ ಮನೆ ದೇವರು’ ಎಂದು ನಾವು ಹೇಳುತ್ತಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಬಿಜೆಪಿ ನಮ್ಮ ಯಶಸ್ವಿ ಗ್ಯಾರಂಟಿ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ ಬಗ್ಗೆ ಅಪ್ಪಟ ಸುಳ್ಳನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಪ್ರಕಟಿಸಿ ಸಿಕ್ಕಿ ಹಾಕಿಕೊಂಡಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರದೆ ಮೋಸ ಮಾಡಿದೆ ಎನ್ನುವುದು ಬಿಜೆಪಿ ಆರೋಪ. ಪ್ರಧಾನಿ ನರೇಂದ್ರ ಮೋದಿಯವರೇ, ಇದೇನು ನಮಗೆ ಆಶ್ಚರ್ಯ ಉಂಟುಮಾಡಿಲ್ಲ. ಮನೆ ಒಡೆಯನ ಬುದ್ದಿ ಮನೆಯವರಿಗೆಲ್ಲ ಬಂದಿದೆ. ಹೋದಲ್ಲಿ ಬಂದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳುಗಳನ್ನು ಉದುರಿಸುವ ನಿಮ್ಮಿಂದಲೇ ಪ್ರೇರಣೆ ಪಡೆದು ಮಹಾರಾಷ್ಟ್ರ ಬಿಜೆಪಿ ಇಷ್ಟೊಂದು ನಿರ್ಲಜ್ಜತನದಿಂದ ಈ ಹಸಿಸುಳ್ಳನ್ನು ಪ್ರಕಟಿಸಿದೆ ಎನ್ನುವುದು ನಿಸ್ಸಂಶಯ ಎಂದು ಅವರು ಟೀಕಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್ ತಿಂಗಳಿನಿಂದ ಈ ವರೆಗೆ 1.22 ಕೋಟಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ಸಂದಾಯವಾಗುತ್ತಿದೆ. ಈ ರೀತಿ ಒಟ್ಟು 30,285 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಅನುಮಾನ ಇದ್ದವರು ಈ 1.22 ಕೋಟಿ ಮನೆ ಒಡತಿಯರನ್ನೇ ಕೇಳಿ ಪರಿಹರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳಾಗಿರುವ ಕಾರಣ ದಯವಿಟ್ಟು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ದೇಶದ ಜನತೆಯ ಕ್ಷಮೆ ಯಾಚಿಸಿ, ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಎಂದು ಮುಖ್ಯಮಂತ್ರಿ ಆಗ್ರಹಿಸುತ್ತೇನೆ.

ಮಹಾರಾಷ್ಟ್ರ ಬಿಜೆಪಿ ತಾನು ಪ್ರಕಟಿಸಿರುವ ಸುಳ್ಳಿನ ಜಾಹೀರಾತಿನಷ್ಟೇ ಗಾತ್ರದ ಜಾಹೀರಾತಿನಲ್ಲಿ ಸತ್ಯ ಸಂಗತಿಯನ್ನು ತಿಳಿಸಿ ಅಲ್ಲಿನ ಎಲ್ಲ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನೋಡಿಕೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ನಮ್ಮ ಸರಕಾರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ವಾದಾ ದಿಯಾ-ಪೂರಾ ಕಿಯಾ: ಮಹಾರಾಷ್ಟ್ರದ ಬಿಜೆಪಿ ‘ಕರ್ನಾಟಕ ಸರಕಾರ ವಾದಾ ಕಿಯಾ: ಧೋಖಾ ದಿಯಾ’ ಎಂದು ಸುಳ್ಳು ಜಾಹಿರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ತಮ್ಮದೇ ಶೈಲಿಯಲ್ಲಿ ಉತ್ತರಿಸಿ, ‘ವಾದಾ ದಿಯಾ-ಪೂರಾ ಕಿಯಾ’ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.



Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News