ಒಬಿಸಿ ಮೀಸಲಾತಿ ಕುರಿತು ಸುಳ್ಳು ಆರೋಪ : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ದೂರು

Update: 2024-04-25 14:48 GMT

ನರೇಂದ್ರ ಮೋದಿ | PC : PTI 

ಬೆಂಗಳೂರು: ‘ಹಿಂದುಳಿದ ವರ್ಗದ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯವನ್ನು ಸೇರ್ಪಡೆ ಮಾಡುವ ಮೂಲಕ ಹಿಂದುಳಿದ ವರ್ಗಕ್ಕಿದ್ದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ’ ಎಂದು ಪ್ರಧಾನಿ ಮೋದಿ, ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿ ರಾಜ್ಯ ಚುನಾವಣಾ ಆಯೋಗಗಕ್ಕೆ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿದೆ.

ಗುರುವಾರ ಮಾಜಿ ಸಂಸದ ಹಾಗೂ ಪಕ್ಷದ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ದೂರು ಸಲ್ಲಿಕೆ ಮಾಡಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಜತೆಗೆ, ಇಂತಹ ಹೇಳಿಕೆ ನೀಡದಂತೆ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ‘ಪ್ರಧಾನಿ ನರೇಂದ್ರ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ರಾಜಸ್ಥಾನದ ಚುನಾವಣಾ ಸಭೆಯಲ್ಲಿ ಈ ರೀತಿ ಮಾತನಾಡಿದ್ದಾರೆ. ದೇಶದ ಆಸ್ತಿ ಸರ್ವೆ ಮಾಡುತ್ತಾರೆ ಎಂದು ಮಾತನಾಡಿದ್ದಾರೆ. ಸಾವನ್ನಪ್ಪಿದ ಮೇಲೆ ಅವರ ಆಸ್ತಿಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. ದಲಿತರ ಮೀಸಲಾತಿಯನ್ನು ಕಡಿತ ಮಾಡಿ ಮುಸ್ಲಿಮರಿಗೆ ಕೊಡುತ್ತಾರೆ ಎಂದು ಆರೋಪಿಸಿದ್ದಾರೆ ಎಂದರು.

ಸಂವಿಧಾನ ಆಧಾರದ ಮೇಲೆ ನಾವು ಮೀಸಲಾತಿ ಕೊಡುವುದು ಮಾಡಿದ್ದೇವೆ. ಸಂವಿಧಾನದ ವಿರುದ್ಧ ನಾವು ಯಾವುದು ಮಾಡಿಲ್ಲ. ಯಾರ ಆಸ್ತಿಯನ್ನು ಸರ್ವೆ ಮಾಡಲು ನಾವು ಪ್ರಣಾಳಿಕೆಯಲ್ಲೂ ಕೊಟ್ಟಿಲ್ಲ. ಈ ಹಿನ್ನೆಲೆ ಪ್ರಧಾನಿ ಮೋದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕು. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಚುನಾವಣಾ ಪ್ರಚಾರದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ನಟ ಶೃತಿ ವಿರುದ್ಧ ದೂರು: ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಗುರಿಯಾಗಿಸಿಕೊಂಡು ಕೀಳುಮಟ್ಟದಲ್ಲಿ ಟೀಕೆ ಮಾಡಿರುವ ಬಿಜೆಪಿ ನಾಯಕಿ, ಚಿತ್ರನಟಿ ಶೃತಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಗಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ದೂರು ಸಲ್ಲಿಕೆ ಮಾಡಿದ್ದಾರೆ.

ರಜೆ ನೀಡಿಲ್ಲವೆಂದು ದೂರು: ಲೋಕಸಭೆ ಚುನಾವಣೆ ಹಿನ್ನೆಲೆ ಇಲ್ಲಿನ ಜೆಪಿ ನಗರದ 3ನೇ ಹಂತದಲ್ಲಿರುವ ಖಾಸಗಿ ಸ್ಕೂಲ್‍ ಮತದಾನ ದಿನ ರಜೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಗಕ್ಕೆ ದೂರು ಸಲ್ಲಿಕೆ ಮಾಡಿದ್ದು, ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News