ಭ್ರೂಣ ಹತ್ಯೆ ಪ್ರಕರಣಗಳು ಅಪಮಾನಕರ, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ : ಸಚಿವ ದಿನೇಶ್ ಗುಂಡೂರಾವ್

Update: 2023-11-29 17:13 GMT

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಗಳು ನಡೆದಿರುವುದು ಅಪಮಾನಕರ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಕ್ಯಾನಿಂಗ್ ಸೆಂಟರ್‍ ಗಳನ್ನು ಪರಿಶೀಲನೆ ಮಾಡಲು, ಆಸ್ಪತ್ರೆಗಳಲ್ಲಿ ಅಬಾರ್ಷನ್‍ಗಳು ಆಗುತ್ತಿದ್ದರೆ ಯಾವ ಕಾರಣಕ್ಕೆ ಆಗುತ್ತಿವೆ ಎಂಬ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದರು.

ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳು ಹುಟ್ಟಿದ್ದಾರೆ. ಎಷ್ಟು ಮಂದಿ ಗರ್ಭಿಣಿ ಮಹಿಳೆಯರು ನೋಂದಣಿ ಆದ ನಂತರ ನಿರಂತರ ತಪಾಸಣೆಗೆ ಗೈರು ಹಾಜರಾಗಿದ್ದಾರೆ ಎಂದು ನಿರಂತರವಾಗಿ ಪರಿಶೀಲನೆ ಮಾಡಬೇಕು. ಅಲ್ಲದೆ, ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತಿ ತಿಂಗಳು ಎಷ್ಟು ಸ್ಕ್ಯಾನಿಂಗ್ ಸೆಂಟರ್‍ ಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ಬಗ್ಗೆ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆ ಆಯುಕ್ತರು ಪ್ರತಿ ಮೂರು ತಿಂಗಳಿಗೊಮ್ಮೆ ಇಡೀ ರಾಜ್ಯದಲ್ಲಿ ನಡೆದಿರುವ ಪ್ರಗತಿ ಬಗ್ಗೆ ಹಾಗೂ ಸಚಿವರ ಅಧ್ಯಕ್ಷತೆಯ ಸಮಿತಿಯು ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಎರಡು ದಿನಗಳಲ್ಲಿ ಈ ಸಂಬಂಧ ಎಸ್.ಒ.ಪಿ.ಯನ್ನು ಹೊರಡಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಡ್ಯದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆಗಳ ಪ್ರಕರಣ ಕುರಿತು ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. ಅವರೊಂದಿಗೆ ನಮ್ಮ ಇಲಾಖೆಯೂ ಕೈ ಜೋಡಿಸಿ ಕೆಲಸ ಮಾಡಿದರೆ ಇಂತಹ ಪ್ರಕರಣಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಡ್ಯದಲ್ಲಿ ಆಗಿರುವ ಘಟನೆಗೆ ಸಂಬಂಧಿಸಿದಂತೆ ನಮ್ಮ ಇಲಾಖೆಯ ಅಧಿಕಾರಿಗಳು ಈ ಹಿಂದೆ ಪರಿಶೀಲನೆಗೆ ಹೋಗಿದ್ದರು. ಆದರೆ, ಆ ವ್ಯಕ್ತಿ ಸಿಕ್ಕಿರಲಿಲ್ಲ. ಮಂಡ್ಯ ಜಿಲ್ಲಾ ವೈದ್ಯಾಧಿಕಾರಿಯಿಂದ ಈ ಬಗ್ಗೆ ಏನಾದರೂ ಕರ್ತವ್ಯಲೋಪ ಆಗಿದೆಯೇ ಎಂಬುದರ ಕುರಿತು ಹಿರಿಯ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಚೀನಾದಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಹಾಗೂ ಇನ್‍ಫ್ಲೊಯೆಂಜಾ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಸರಕಾರ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ರಾಜ್ಯದಲ್ಲಿ ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ. ಈಗಾಗಲೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ನೀಡಿದೆ.

ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್, ಮಾಸ್ಕ್, ಪಿಪಿಇ ಕಿಟ್‍ಗಳ ಲಭ್ಯತೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ. ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಶೀತಸಂಬಂಧಿತ ಪ್ರಕರಣಗಳು ಹೆಚ್ಚಾಗಿ ಕಂಡು ಬರುವುದು ಸಾಮಾನ್ಯ. ಕೆಮ್ಮು, ನೆಗಡಿ ಹೆಚ್ಚಿದ್ದರೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News