ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Update: 2023-09-05 14:30 GMT
Photo- PTI 

ಬೆಂಗಳೂರು, ಸೆ.5: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ದೂರು ಸಲ್ಲಿಕೆ ಮಾಡಿದ್ದು, ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಸನಾತನ ಧರ್ಮೀಯ ಸಮುದಾಯವನ್ನೇ ನಾಶ ಮಾಡುವಂತೆ ಕರೆಕೊಟ್ಟಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮೀಯ ಸಮುದಾಯದ ಮಾರಣ ಹೋಮಕ್ಕೆ ಕರೆ ಕೊಡುವ ಮೂಲಕ ಭಾರತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇವರ ಇಂತಹ ಆಘಾತಕಾರಿ ಹೇಳಿಕೆಯಿಂದ ಪ್ರೇರೇಪಣೆಗೆ ಒಳಗಾಗುವ ದ್ರಾವಿಡ ಮುನ್ನೇತ್ರ ಕಳಗಂ ಕಾರ್ಯಕರ್ತರಿಂದ ಸನಾತನ ಹಿಂದೂ ಧರ್ಮೀಯ ಜನಾಂಗಕ್ಕೆ ಪ್ರಾಣಾಪಾಯದ ಭೀತಿಗಳು ಹೆಚ್ಚಾಗಿರುವ ಹಿನ್ನೆಲೆ, ಈ ರೀತಿ ಸಂವಿಧಾನ ವಿರೋಧಿ ಮತ್ತು ದೇಶ ವಿರೋಧಿ ಹೇಳಿಕೆ ನೀಡಿರುವ ಹಾಗೂ ಸನಾತನ ಹಿಂದೂ ಧರ್ಮವನ್ನು ಅನುಸರಿಸುವ ನೂರಾರು ಕೋಟಿ ಹಿಂದೂಗಳ ಮಾರಣ ಹೋಮಕ್ಕೆ ಬಹಿರಂಗವಾಗಿ ಕರೆಕೊಟ್ಟಿರುವ ಉದಯನಿಧಿ ವಿರುದ್ಧ ಐಪಿಸಿ ಕಲಂ 120ಬಿ, 153ಎ, 295 ಮತ್ತು 504 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News