ಹಣಕಾಸು ಸಚಿವೆಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಪರಿಜ್ಞಾನವೇ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

Update: 2024-07-27 16:15 GMT

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವ ಪರಿಜ್ಞಾನವೇ ಇಲ್ಲದಂತಾಗಿದೆ. ಆದ್ದರಿಂದಲೇ ಕೇಂದ್ರದ ಬಜೆಟ್‍ನಲ್ಲಿ ಕರ್ನಾಟಕವನ್ನು ಮರೆತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಆದರೆ, ಕರ್ನಾಟಕದ ಮೇಲೆ ಕನಿಷ್ಠ ಕೃತಜ್ಞತೆಯು ಅವರಿಗಿಲ್ಲ. ಕೇಂದ್ರ ಬಜೆಟ್‍ನಲ್ಲಿ ನಮಗೆ ಚೊಂಬು ನೀಡಿದ್ದಾರೆ ಎಂದರು.

ಬಿಜೆಪಿ ಹಾಗೂ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನಯಾ ಪೈಸೆ ಕೊಡುಗೆ ನೀಡದಿದ್ದರೂ ದುರಾದೃಷ್ಟಾವಶಾತ್ 19 ಜನ ಸಂಸದರನ್ನು ನಮ್ಮ ಮತದಾರರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇದು ನಮ್ಮ ಜನರ ದುರಾದೃಷ್ಟ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕರ್ನಾಟಕಕ್ಕೆ ಅನ್ಯಾಯ ತಪ್ಪಿದ್ದಲ್ಲ. ಹಿಂದಿನ 10 ವರ್ಷಗಳಲ್ಲಿ ಭಾರತ ದೇಶವನ್ನು ಬಿಜೆಪಿ 25 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಹಣಕಾಸು ಸಚಿವೆಯ ಪತಿ ಪರಕಾಲ ಪ್ರಭಾಕರ್ ಅನೇಕ ಬಾರಿ ಹೇಳಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ನರೇಂದ್ರ ಮೋದಿಯವರು ಹತ್ತು ವರ್ಷದ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಮರೆತು ಹೋಗಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಈಗ ಗಾಳಿ ಮತ್ತು ಬೆಳಕನ್ನು ಹೊರತುಪಡಿಸಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಕೇವಲ ಆಂಧ್ರಪ್ರದೇಶ ಮತ್ತು ಬಿಹಾರ್ ರಾಜ್ಯಗಳಿಗೆ ಸರಕಾರ ರಚಿಸಲು ಸಹಾಯ ಮಾಡಿದರು ಎನ್ನುವ ಕಾರಣಕ್ಕೆ ಬಜೆಟ್‍ನಲ್ಲಿ ಭರಪೂರ ಕೊಡುಗೆಗಳನ್ನು ಕೊಡಲಾಗಿದೆ. ಬಿಹಾರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 15 ಸ್ಥಾನಗಳನ್ನು ಗೆದ್ದಿದ್ದರೆ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಮೋದಿಯವರ ಸರಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಈಗಲೂ ಸಹ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ಮಧ್ಯೆ ತಿಕ್ಕಾಟ ನಡೆಯುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ದೇಶಕ್ಕೆ ಭವಿಷ್ಯವಿಲ್ಲ, ಯುವ ಜನರಿಗೆ ಉದ್ಯೋಗವಿಲ್ಲ. ಹೊಸ ಉದ್ದಿಮೆಗಳು ಸ್ಥಾಪನೆಯಾಗುತ್ತಿಲ್ಲ. ಎಲ್ಲಿ ನೋಡಿದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಏನನ್ನು ನೋಡಿ ಮತ ಹಾಕಿದರೋ ಗೊತ್ತಿಲ್ಲ. ಅವರಿಗೆ 19 ಸ್ಥಾನ ಕೊಟ್ಟಿದ್ದಾರೆ. ರಾಜಕೀಯ ಅನ್ಯಾಯವಾಗುತ್ತಿದ್ದರೂ ಗೆದ್ದವರು ಬಾಯಿ ಬಿಡುತ್ತಿಲ್ಲ. ನಮ್ಮ ಮತದಾರರು ಅರ್ಥ ಮಾಡಿಕೊಂಡು ಇಂತಹ ನಿಷ್ಟ್ರಯೋಜಕರನ್ನು ಇನ್ನು ಮುಂದಾದರೂ ಕೇಂದ್ರಕ್ಕೆ ಕಳುಹಿಸಬಾರದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ಕೇಂದ್ರ ಸರಕಾರ ಎಲ್ಲ ರಾಜ್ಯಗಳನ್ನು ಒಂದೇ ರೀತಿ ನೋಡಿ ಅನುಕೂಲ ಮಾಡಿ ಕೊಡಬೇಕಿತ್ತು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲು ಸಹಕರಿಸಿದವರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದು ಕೇಂದ್ರ ಸರಕಾರದ ಬಜೆಟ್ ಅಲ್ಲ, ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಬಜೆಟ್ ಎಂದರು.

ಅದಾನಿ, ಅಂಬಾನಿಗೆ ಸಂಪತ್ತು ಲೂಟಿ ಮಾಡಲು ಸ್ವಾತಂತ್ರ್ಯ..!

ಪ್ರಧಾನಿ ಮೋದಿಯವರು ರಾಜ್ಯಗಳ ಮತ್ತು ದೇಶದ ಸಂಪತ್ತನ್ನು ಅದಾನಿ, ಅಂಬಾನಿ ಕಂಪೆನಿಗಳಿಗೆ ಲೂಟಿ ಮಾಡಲು ಸ್ವಾತಂತ್ರ್ಯ ಕೊಟ್ಟಿದ್ದಾರೆ. ಗಣಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ರೈಲು ಜೊತೆಗೆ 25,000 ಕಿಲೋಮೀಟರ್ ನಷ್ಟು ಹೆದ್ದಾರಿಗಳನ್ನು ಖಾಸಗಿಯವರಿಗೆ ಬಿಜೆಪಿ ಸರಕಾರ ಮಾರಿಕೊಂಡಿದೆ. 40,000 ಕಿಲೋಮೀಟರ್ ನಷ್ಟು ಉದ್ದದ ವಿದ್ಯುತ್ ಮಾರ್ಗಗಳನ್ನು ಖಾಸಗಿ ಅವರಿಗೆ ಕೊಟ್ಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News