ಲುಲು ಮಾಲ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಎಂದು ಸುಳ್ಳು ಸುದ್ದಿ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ FIR
ಬೆಂಗಳೂರು: ಕೇರಳದ ಕೊಚ್ಚಿ ನಗರದಲ್ಲಿರುವ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕೆ ಅಗೌರವ ತೋರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇರಳದ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಫೋಟೋಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೇ ರೀತಿಯ ಪೋಸ್ಟ್ ಹಂಚಿಕೊಂಡಿರುವ ಆಕೆ ʼʼಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ? ನಿಮ್ಮ ಮಾಲ್ನವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಬೆಂಗಳೂರಿನ ಲುಲು ಮಾಲ್ ಬಹಿಷ್ಕರಿಸಿʼʼ ಎಂದು ಹ್ಯಾಷ್ಟ್ಯಾಗ್ ಬಳಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾಳೆ.
ಬಿಜೆಪಿ ಕಾರ್ಯಕರ್ತೆಯ ಈ ಪೋಸ್ಟ್ ನಕಲಿ ಮತ್ತು ಸುಳ್ಳು ಎಂದು ಸತ್ಯ ಪರಿಶೀಲನಾ ವಿಭಾಗ ಖಚಿತಪಡಿಸಿದ್ದು, ನಂತರ ಆಕೆಯ ವಿರುದ್ಧ ತುಮಕೂರು ನಗರದ ಜಯನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 153 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಸಹ ನೀಡಿದ್ದಾರೆ.
ಉಡುಪಿ ಖಾಸಗಿ ಕಾಲೇಜಿನ ವೀಡಿಯೊ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ, ಬಂಧನಕ್ಕೊಳಗಾದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ಥರ ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್ ಗಳನ್ನು ಹಂಚಿರುವುದು ಇದೇ ಮೊದಲಲ್ಲ.
► ಒಡಿಶಾದಲ್ಲಿ ನಡೆದ ರೈಲು ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಶಕುಂತಲಾ
250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಜೂನ್ 2 ರಂದು ನಡೆದ ಒಡಿಶಾದ ರೈಲು ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಆಕೆ, ಹಳಿಯ ಬಳಿ ಮಸೀದಿಯಿತ್ತು. ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಫೋಟೊವೊಂದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಳು. ವಾಸ್ತವದಲ್ಲಿ ಅದು ಮಸೀದಿಯಾಗಿರಲಿಲ್ಲ, ಇಸ್ಕಾನ್ ದೇವಾಲಯವಾಗಿತ್ತು. ಅಲ್ಲಿ ಮಸೀದಿ ಇರಲೇ ಇಲ್ಲ. ಈ ಬಗ್ಗೆ altnews.in ಸೇರಿ ಹಲವು ಸುದ್ದಿ ಸಂಸ್ಥೆಗಳು ಫ್ಯಾಕ್ಟ್ ಚೆಕ್ ಮಾಡಿ ಶಕುಂತಲಾ ಸುಳ್ಳನ್ನು ಬಯಲು ಮಾಡಿದ್ದವು.
ಅಲ್ಲದೇ, ಈ ಘಟನೆಗೆ 'ಕೋಮು ಆಯಾಮ' ನೀಡಲು ಪ್ರಯತ್ನಿಸಿದ್ದ ಶಕುಂತಲಾ ವಿರುದ್ಧ ಒಡಿಶಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.