ಸಚಿವ ಎಚ್.ಸಿ.ಮಹದೇವಪ್ಪ ಹೆಸರಿನಲ್ಲಿ ನಕಲಿ ಸಹಿ, ಲೆಟರ್‌ಹೆಡ್ ಸೃಷ್ಟಿ: ಆರೋಪಿ ಸೆರೆ

Update: 2023-10-12 12:23 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೆಸರಿನಲ್ಲಿ ನಕಲಿ ಸಹಿ ಹಾಗೂ ಲೆಟರ್‌ಹೆಡ್ ಸೃಷ್ಟಿಸಿ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸಾಲ ಸೌಲಭ್ಯಗಳ ಕುರಿತಂತೆ ಶಿಫಾರಸು ಮಾಡಿ ದುರ್ಬಳಕೆ ಮಾಡಿದ ಆರೋಪದಡಿ ವಿಧಾನಸೌಧ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಚಿವರ ಕಚೇರಿಯ ಆಪ್ತ ಕಾರ್ಯದರ್ಶಿ ಸಿ.ಎಂ.ರಾಜೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಮೈಸೂರು ಮೂಲದ ಮಹದೇವ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಯು ಸಚಿವರ ನಕಲಿ ಸಹಿ ಹಾಗೂ ಲೆಟರ್‌ಹೆಡ್ ಸೃಷ್ಟಿಸಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕರುಗಳಿಗೆ ಸಚಿವರ ಶಿಫಾರಸು ಇರುವ ಪತ್ರ ತಯಾರಿಸಿದ್ದ ಎಂದು ಹೇಳಲಾಗಿದೆ.

ನಕಲಿ ಪತ್ರಗಳನ್ನು ಸಚಿವರ ಆಪ್ತ ಕಚೇರಿಗೆ ತಂದು ಇದರ ಮೂಲ ಪ್ರತಿಗಳು ಕಾಣೆಯಾಗಿದ್ದು, ಮತ್ತೊಂದು ನೀಡುವಂತೆ ಕೇಳಿಕೊಂಡಿದ್ದನು. ಇದನ್ನು ಪರಿಶೀಲಿಸಿದ ರಾಜೇಂದ್ರ ಪತ್ರದಲ್ಲಿ ಸಚಿವರ ಹೆಸರನ್ನು ಫೋರ್ಜರಿ ಮಾಡಿರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ನಕಲಿ ಪತ್ರ ತಂದುಕೊಟ್ಟಿದ್ದ ಮಹದೇವನನ್ನು ಬಂಧಿಸಲಾಗಿದೆ. ಆದಿ ಜಾಂಬವ ಅಭಿವೃದ್ಧಿ ಹಾಗೂ ಬೋವಿ ನಿಗಮಗಳ ವ್ಯವಸ್ಥಾಪಕ ನಿರ್ದೇಕರುಗಳಿಗೆ ಬರೆದಿದ್ದ ಪತ್ರಗಳಲ್ಲಿ ಸಮುದಾಯದ ಸುಮಾರು 15-20 ಮಂದಿ ಫಲಾನುಭವಿಗಳಿಗೆ ಸಾಲ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಶಿಫಾರಸು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News