ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯ ಪಿಂಚಣಿ: ಏಕಸದಸ್ಯ ಪೀಠದ ಆದೇಶ ರದ್ದು

Update: 2023-07-26 16:05 GMT

ಬೆಂಗಳೂರು, ಜು.26: ಮೃತ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ವೃದ್ಧ ಪತ್ನಿಗೆ ಪಿಂಚಣಿ ಮತ್ತು ಹಿಂಬಾಕಿ ಪಾವತಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪನ್ನು ಹೈಕೋರ್ಟ್‍ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ.

ಈ ಸಂಬಂಧ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.

ಕೇಂದ್ರ ಸರಕಾರಿ ಸನ್ಮಾನ್ ಪಿಂಚಣಿ ಯೋಜನೆಯ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು 2014ರಲ್ಲಿ ಮಾರ್ಗಸೂಚಿ ಪ್ರಕಟಿಸಿದೆ. ಅದನ್ನು ರಾಜ್ಯ ಸರಕಾರವು ಪಾಲಿಸುತ್ತಿದೆ. ಆ ಮಾರ್ಗಸೂಚಿ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಅಥವಾ ಹೋರಾಟಗಾರ್ತಿ ಸಾವನ್ನಪ್ಪಿದ ನಂತರ ಅವರ ಹೆಸರಿನಲ್ಲಿ ಪಿಂಚಣಿ ವಿತರಿಸುವಂತಿಲ್ಲ. ಜತೆಗೆ, ಹೋರಾಟಗಾರರ ವಿಷಯವು ಪರಿಶೀಲನೆಯಲ್ಲಿದ್ದರೂ ಪಿಂಚಣಿ ಪಾವತಿಸುವಂತಿಲ್ಲ. ಅದರಂತೆ ರಾಜ್ಯ ಸರಕಾರವು ಪ್ರಕರಣದಲ್ಲಿ ಮೃತ ಸ್ವಾತಂತ್ರ್ಯ ಹೋರಾಟಗಾರರ ವೃದ್ಧ ಪತ್ನಿಯಾದ ಬೆಳಗಾವಿಯ ನಿವಾಸಿ ಸಾವಂತ್ರವ್ವ (89) ಅವರಿಗೆ ಪಿಂಚಣಿ ನಿರಾಕರಿಸಿ ರಾಜ್ಯ ಸರಕಾರ ಹೊರಡಿಸಿದ ಆದೇಶ ಸೂಕ್ತವಾಗಿದೆ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಬಸಪ್ಪಗೆ 1992ರಿಂದ ನೀಡಲಾಗುತ್ತಿದ್ದ ಪಿಂಚಣಿಯನ್ನು ಅಗತ್ಯ ದಾಖಲೆಗಳ ಕೊರತೆಯಿಂದ 2000 ಇಸವಿಯಲ್ಲಿ ನಿಲ್ಲಿಸಲಾಗಿತ್ತು. ಬಸಪ್ಪನವರ ಮರಣ ನಂತರದ 12 ವರ್ಷ ಬಳಿಕ ಸಾವಂತ್ರವ್ವ ಪಿಂಚಣಿ ಕೋರಿದ್ದರು. ಸರಕಾರವು ಆಕೆಯ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮದಲ್ಲಿ ಅವಕಾಶವಿಲ್ಲದ ಕಾರಣ ಪಿಂಚಣಿ ನಿರಾಕರಿಸಿದೆ. ಹೀಗಿದ್ದರೂ ಏಕಸದಸ್ಯ ನ್ಯಾಯಪೀಠವು ಸಾವಂತ್ರವ್ವಗೆ ಪಿಂಚಣಿ ನೀಡಲು ನಿರ್ದೇಶಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News