ಪಂಚಾಯತ್ ನಿಂದ ಹಿಡಿದು ವಿಧಾನಸೌಧದ ವರೆಗೆ..: ‘ಸಂವಿಧಾನ ಪೀಠಿಕೆ ಓದು’ ವಿಶ್ವ ದಾಖಲೆ..!
ಬೆಂಗಳೂರು, ಸೆ.15: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣಯ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಓದು' ಕಾರ್ಯಕ್ರಮವೂ ʼವರ್ಲ್ಡ್ ಬುಕ್ ಆಫ್ ರೆಕಾರ್ಡ್ʼ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲೆ ನೋಂದಣಿ ಮಾಡಿಕೊಂಡಿದ್ದ ರಾಜ್ಯ, ದೇಶ, ವಿದೇಶಗಳಿಂದ 2.27 ಕೋಟಿಗೂ ಅಧಿಕ ಸಂಖ್ಯೆಯ ಜನರು ಆನ್‍ಲೈನ್ ಮೂಲಕ ‘ಸಂವಿಧಾನ ಪೀಠಿಕೆ ಓದು' ಕಾರ್ಯಕ್ರಮದಲ್ಲಿ ಭಾಗಿಯಾದರೆ, ಗ್ರಾಮ ಪಂಚಾಯತ್ ಕಚೇರಿಯಿಂದ ಹಿಡಿದು ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ಸಚಿವಾಲಯದ ವರೆಗಿನ ಎಲ್ಲ ಕಚೇರಿ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಕಂಪೆನಿಗಳು ಸೇರಿದಂತೆ ಹಲವೆಡೆ ತಾವಿರುವ ಸ್ಥಳದಲ್ಲೇ ‘ಸಂವಿಧಾನ ಓದು ಪೀಠಿಕೆ ಓದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜತೆಗೆ ಆಸ್ಟ್ರೇಲಿಯಾ, ಅಮೆರಿಕಾ, ಕೆನಡಾ, ಸೌದಿ ಅರೇಬಿಯಾ, ಸ್ಪೇನ್, ಸ್ವೀಡನ್, ಜರ್ಮನಿ, ತೈವಾನ್, ಇಟಲಿ ಸೇರಿದಂತೆ ಸುಮಾರು 20 ದೇಶದ ಜನರು ಸಂವಿಧಾನ ಪೀಠಿಕೆಯ ಓದು ಅಭಿಯಾನದಲ್ಲಿ ಭಾರೀ ಸಂಖ್ಯೆಯಲ್ಲಿ ಭಾಗಿಯಾದ ಹಿನ್ನೆಲೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಲಂಡನ್ ಸಂಸ್ಥೆಯ ಸಿಬ್ಬಂದಿ ಸಮಾಜ ಕಲ್ಯಾಣ ಇಲಾಖೆಗೆ ದಾಖಲೆಯ ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಈ ಪ್ರಪಂಚವು ಸಮಾನತೆ, ಪ್ರೀತಿ, ವ್ಯಕ್ತಿ ಗೌರವ, ಹಾಗೂ ಸಾಮಾಜಿಕ ಭದ್ರತೆಯನ್ನು ಬಯಸುತ್ತಿದ್ದು, ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಇನ್ನು ಭಾರತವೂ ಜಗತ್ತಿನ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅಸಮಾನತೆಯನ್ನು ಮೆಟ್ಟಿ, ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು’ ಎಂದು ನುಡಿದರು.
‘ಪರಸ್ಪರ ವ್ಯಕ್ತಿ ಗೌರ, ಘನತೆ, ನ್ಯಾಯ, ಹಕ್ಕುಗಳು, ಸಹಿಷ್ಣುತೆ, ಮಹಿಳಾ ಹಕ್ಕುಗಳ ರಕ್ಷಣೆ, ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಎಲ್ಲರ ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಅವರು ತಿಳಿಸಿದರು.