ವಿದ್ಯಾರ್ಥಿಗಳ ಕೈಗೆ ಮಾದಕ ವಸ್ತು ಸಿಗದಂತೆ ಇಲಾಖೆಯಿಂದ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್‌

Update: 2024-07-18 09:50 GMT

PC | PTI 

ಬೆಂಗಳೂರು : ʼರಾಜ್ಯ ಸರಕಾರವು ʼಡ್ರಗ್ಸ್ ಮುಕ್ತ ಕರ್ನಾಟಕ‌ʼ ನಿರ್ಮಾಣದ ಘೋಷಣೆ ಮಾಡಿದ್ದು, ಯಾವುದೇ ಕಾರಣಕ್ಕೂ ಉಡ್ತಾ ಕರ್ನಾಟಕ ಆಗಲು ಬಿಡುವುದಿಲ್ಲʼ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ್ ಸರ್ಜಿ ಅವರು ಪ್ರಸ್ತಾಪಿಸಿದ, 'ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವುದು ಗಮನಕ್ಕೆ ಬಂದಿದೆಯೇ?, ದಾಖಲಾಗಿರುವ ಪ್ರಕರಣಗಳೆಷ್ಟು? ಮತ್ತು ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಆಗಿದೆʼ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು‌.

"ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಪೆಡ್ಲರ್‌ಗಳ ಮೇಲೆ‌ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ 2023ರಲ್ಲಿ 2409 ಶಾಲಾ-ಕಾಲೇಜುಗಳಲ್ಲಿ 3.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿತ್ತು. ಪ್ರಸಕ್ತ ವರ್ಷ ಜೂನ್‌ನಲ್ಲಿ 3,600 ಶಾಲಾ-ಕಾಲೇಜುಗಳಲ್ಲಿ 5.50 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದೇವೆ‌. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗಬಾರದು ಎಂಬುದು ನಮ್ಮ ಉದ್ದೇಶ. ಅವರಿಗೆ ಜಾಗೃತಿ ಮೂಡಿಸಿದರೆ ಡ್ರಗ್ಸ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ" ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದರು.

ʼ2022ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 6406 ಪ್ರಕರಣ ದಾಖಲಿಸಿದ್ದು, 6164 ಆರೋಪಿಗಳನ್ನು ಬಂಧಿಸಲಾಗಿದೆ. 3881 ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಇದರಲ್ಲಿ 2365 ಜನರಿಗೆ ಶಿಕ್ಷೆಯಾಗಿದೆ. 2023ರಲ್ಲಿ 6764 ಪ್ರಕರಣಗಳಲ್ಲಿ 2280 ಬಂಧಿಸಲಾಗಿದೆ. 4187 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, 2280 ಆರೋಪಿತರಿಗೆ ಶಿಕ್ಷೆಯಾಗಿದೆ. ಪ್ರಸಕ್ತ ವರ್ಷ ಜುಲೈ.10ರವರೆಗೆ 1791 ಪ್ರಕರಣಗಳಲ್ಲಿ 1179 ಆರೋಪಿಗಳನ್ನು ಬಂಧಿಸಲಾಗಿದೆ. 884 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು 189 ಆರೋಪಿಗಳಿಗೆ ಶಿಕ್ಷೆಯಾಗಿದೆʼ ಎಂದು ಮಾಹಿತಿ ನೀಡಿದರು.

150 ಕೋಟಿ ರೂ.‌ ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ :

ರಾಜ್ಯದಲ್ಲಿ ಸುಮಾರು 150 ಕೋಟಿ ರೂ.‌ ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. 10 ಟನ್ ಗಾಂಜಾ, 250 ಕೆಜಿಯಷ್ಟು ಸಿಂಥೆಟಿಕ್ ಡ್ರಗ್ಸ್ ಸುಟ್ಟು ಹಾಕಲಾಗಿದೆ. ಯುವಕರು ಮಾದಕ ವ್ಯಸನದಲ್ಲಿ ಸಿಲುಕಿಕೊಂಡು ನರಳುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ವಿರುದ್ಧವಾಗಿ ನಿರಂತರವಾದ ಹೋರಾಟ ನಡೆಸಲಾಗುತ್ತಿದೆ ಎಂದರು.

ಮುಲಾಜಿಲ್ಲದೆ‌ ಕ್ರಮ :

ಸದಸ್ಯ ಡಾ. ಧನಂಜಯ್ ಸರ್ಜಿ ಅವರು, ಡಾರ್ಕ್‌ವೆಬ್ ಮೂಲಕ ಡ್ರಗ್ಸ್ ಬರುತ್ತಿದೆ. ಈ ಬಗ್ಗೆ ಗಮನಹರಿಸಬೇಕು. ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡು ಅಮಲಿನಲ್ಲಿ ಓಡಾಡುವ ವೀಡಿಯೋಗಳು ವೈರಲ್ ಆಗುತ್ತಿವೆ ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಅವರು, ದಂಧೆಯಲ್ಲಿ ಪೊಲೀಸರು ಭಾಗಿಯಾಗುತ್ತಿದ್ದಾರೆ. ಇದಕ್ಕೆ ನಿರ್ಧ್ಯಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಧ್ವನಿ ಎತ್ತಿದರು. ಇದಕ್ಕೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ಸಾವಿರಾರು ಕೇಸ್‌ಗಳನ್ನು ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.‌ ಪೊಲೀಸರು ಭಾಗಿಯಾಗಿರುವುದು ಕಂಡು ಬಂದರೆ, ಅವರ ವಿರುದ್ಧವೂ ಯಾವುದೇ ರೀತಿಯ ಮುಲಾಜಿಲ್ಲದೆ‌ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News