ಕರ್ನಾಟಕದಲ್ಲಿ ಗಣಪತಿಯನ್ನು ಕಂಬಿಯ ಹಿಂದೆ ದೂಡಲಾಗಿದೆ : ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ
ಕುರುಕ್ಷೇತ್ರ: ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣವನ್ನೇ ಆದ್ಯತೆಯನ್ನಾಗಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ನಾಗಮಂಗಲ ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟವನ್ನು ಪ್ರತಿಭಟಿಸಿ ಸಂಘ ಪರಿವಾರದ ಗುಂಪೊಂದು ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಒಬ್ಬರು ಪ್ರತಿಭಟನಾಕಾರರು ತಂದಿದ್ದ ಗಣೇಶ ಮೂರ್ತಿಯನ್ನು ವಶಪಡಿಸಿಕೊಂಡು ಪೊಲೀಸ್ ಜೀಪ್ ನಲ್ಲಿ ಇಟ್ಟಿದ್ದರು. ನಂತರ ಆ ಗಣೇಶ ಮೂರ್ತಿಯನ್ನು ಪೊಲೀಸರೇ ವಿಸರ್ಜಿಸಿದ್ದರು.
ಈ ಘಟನೆಯ ಸುತ್ತ ವಿವಾದ ಸೃಷ್ಟಿಯಾಗಿದ್ದು, “ತುಷ್ಟೀಕರಣ ರಾಜಕಾರಣ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಗುರಿಯಾಗಿದೆ. ಈಗ ಪರಿಸ್ಥಿತಿ ಏನಾಗಿದೆಯೆಂದರೆ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣೇಶ ಮೂರ್ತಿಯನ್ನೂ ಕಂಬಿಯ ಹಿಂದೆ ದೂಡಲಾಗುತ್ತಿದೆ” ಎಂದು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
#WATCH | Kurukshetra, Haryana: PM Narendra Modi says, "Appeasement is the biggest goal for Congress. Today the situation has become such that even Ganpati is being put behind bars in the Congress-ruled state of Karnataka. The whole country is celebrating Ganesh Utsav today and… pic.twitter.com/pRGKVVgCT0
— ANI (@ANI) September 14, 2024
ಕುರುಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಡೀ ದೇಶ ಗಣೇಶೋತ್ಸವವನ್ನು ಇಂದು ಆಚರಿಸುತ್ತಿದ್ದರೆ, ಕಾಂಗ್ರೆಸ್ ಅದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಇಂದಿನ ಕಾಂಗ್ರೆಸ್ ಹಳೆಯ ಕಾಂಗ್ರೆಸ್ ಆಗಿ ಉಳಿದಿಲ್ಲ. ಅದು ನಗರ ನಕ್ಸಲ್ ಕಾಂಗ್ರೆಸ್ ಆಗಿ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳಲು ನಾಚಿಕೆಯೇ ಆಗುತ್ತಿಲ್ಲ” ಎಂದೂ ಆರೋಪಿಸಿದ್ದಾರೆ.