ಗಂಗೊಳ್ಳಿ ಅಗ್ನಿ ದುರಂತ; ಮೀನುಗಾರರಿಗೆ ಪರಿಹಾರ ನೀಡಲು ಅಗತ್ಯ ಕ್ರಮ: ಸಚಿವ ಎಚ್.ಕೆ.ಪಾಟೀಲ್
ಬೆಳಗಾವಿ, ಡಿ.12: ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿಯಲ್ಲಿ ನ.13ರಂದು ನಡೆದ ಅಗ್ನಿ ದುರಂತದಲ್ಲಿ ಬೆಂಕಿಗಾಹುತಿಯಾದ ಮೀನುಗಾರಿಕಾ ಬೋಟ್ ಗಳಿಗೆ ಪರಿಹಾರ ನೀಡಲು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಗುರುರಾಜ್ ಗಂಟಿಹೊಳೆ, ಕುಂದಾಪುರದ ಗಂಗೊಳ್ಳಿಯಲ್ಲಿ ನ.13ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಅನುಭವಿಸಿದ ಮೀನುಗಾರರಿಗೆ ಈವರೆಗೆ ಪರಿಹಾರ ಸಿಗಲಿಲ್ಲ ಎಂದು ಪ್ರಸ್ತಾಪಿಸಿದ ವಿಷಯಕ್ಕೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಪರವಾಗಿ ಎಚ್.ಕೆ.ಪಾಟೀಲ್ ಅವರು ಉತ್ತರಿಸಿದರು.
ಅಗ್ನಿ ದುರಂತದಲ್ಲಿ ಎಂಟು ಯಾಂತ್ರೀಕೃತ ದೋಣಿಗಳು, ದ್ವಿಚಕ್ರ ವಾಹನಗಳು ಬೆಂಕಿಗಾಹುತಿ ಆಗಿವೆ. ಇದರಿಂದ ಸುಮಾರು 7 ಕೋಟಿ ರೂ.ಗಳಷ್ಟು ನಷ್ಟ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಂಕಿಗಾಹುತಿ ಆಗಿರುವ ಮೀನುಗಾರಿಕಾ ದೋಣಿಗಳು, ಬಲೆ, ದ್ವಿಚಕ್ರ ವಾಹನಗಳಿಗೆ ನಿಯಮಾನುಸಾರ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.