ಗರ್ಜೆ ಗ್ರಾಮ ಪಂಚಾಯತ್: ಮಗಳು ಅಧ್ಯಕ್ಷೆ, ತಾಯಿ ಉಪಾಧ್ಯಕ್ಷೆ!

Update: 2023-08-12 14:19 GMT

ಕಡೂರು, ಆ.12: ತಾಯಿ ಮತ್ತು ಮಗಳು ಒಂದೇ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿರುವ ಸ್ವಾರಸ್ಯಕರ ಘಟನೆ ತಾಲೂಕಿನ ಗರ್ಜೆ ಗ್ರಾಮ ಪಂಚಾಯತ್‍ನಲ್ಲಿ ವರದಿಯಾಗಿದೆ.

ಎರಡನೇ ಅವಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಜೊತೆಗೆ ಗೆಲುವು ಸಾಧಿಸಿದ ಪಂಚಾಯತ್‍ನ ಒಟ್ಟು 7 ಜನ ಸದಸ್ಯರಲ್ಲಿ ಮೊದಲಿನಿಂದಲೂ 3 ಮತ್ತು 4 ಜನ ಸದಸ್ಯರ ಎರಡು ಗುಂಪುಗಳಿದ್ದವು. ತಾಯಿ ನೇತ್ರಾವತಿ ಮತ್ತು ಮಗಳು ಸ್ನೇಹಾ ಬೆಂಬಲದಿಂದ ನಾಲ್ಕು ಜನರ ಗುಂಪಿನ ಎನ್.ಆರ್.ರಂಜಿತಾ ಮತ್ತು ಎಂ.ಎಲ್.ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ರಂಜಿತಾ ಮತ್ತು ಪ್ರಕಾಶ್, ನೇತ್ರಾವತಿ ಮತ್ತು ಸ್ನೇಹಾ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ತಾಯಿ ಮತ್ತು ಮಗಳು ಅಧಿಕಾರಕ್ಕೇರಿದ್ದಾರೆ. ಬದಲಾದ ಮೀಸಲಾತಿ ಮತ್ತು 4 ಸದಸ್ಯರ ನಡುವಿನ ಒಗ್ಗಟ್ಟು ಚುನಾವಣೆಯಲ್ಲಿ ತಾಯಿ, ಮಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆ.

ಎರಡನೇ ಅವಧಿಗೆ ಗರ್ಜೆ ಗ್ರಾಮ ಪಂಚಾಯತ್ ಚುನಾವಣೆ ನಡೆದ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸ್ನೇಹಾ ಮತ್ತು ಜಿ.ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್.ನೇತ್ರಾವತಿ ಮತ್ತು ಎಂ.ಜ್ಯೋತಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ತಲಾ 4 ಮತಗಳನ್ನು ಪಡೆದರೆ, ಪ್ರತಿಸ್ರ್ಪಗಳಾದ ಮಲ್ಲಿಕಾರ್ಜುನ್ ಮತ್ತು ಜ್ಯೋತಿ ತಲಾ ಮೂರು ಮತಗಳನ್ನು ಪಡೆದು ಸೋತಿದ್ದರು. ಸ್ನೇಹ ಮತ್ತು ನೇತ್ರಾವತಿ ತಲಾ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿ ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಒಂದೇ ಮನೆಗೆ ಎರಡು ಹುದ್ದೆ!

ಮಗಳು ಸ್ನೇಹಾ ಮತ್ತು ತಾಯಿ ನೇತ್ರಾವತಿ ಗರ್ಜೆ ಗ್ರಾಮದವರಾಗಿದ್ದು, ಒಂದೇ ಮನೆಯಲ್ಲೇ ವಾಸವಾಗಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಗಳು ಸ್ನೇಹಾ ಜಿ.ಮಾದಾಪುರ ಗ್ರಾಮದಿಂದ ಮತ್ತು ತಾಯಿ ಗರ್ಜೆಯಿಂದ ಗೆಲುವು ಸಾಧಿಸಿ ಒಂದೇ ಅವಧಿಯಲ್ಲಿ ಒಂದೇ ಮನೆಯಿಂದ ಇಬ್ಬರು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸ್ನೇಹಾ ಮತ್ತು ನೇತ್ರಾವತಿಗೆ ಒಲಿದು ಬಂದಿರುವುದರಿಂದ ಒಂದೇ ಮನೆಗೆ ಎರಡು ಹುದ್ದೆಗಳು ಸಿಕ್ಕಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News