ಗೌರಿ, ಕಲಬುರ್ಗಿ ಹತ್ಯೆ ಪ್ರಕರಣ | ತ್ವರಿತಗತಿ ನ್ಯಾಯಾಲಯ ಸ್ಥಾಪಿಸದ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ

Update: 2024-07-23 15:06 GMT

ಎಂ.ಎಂ.ಕಲಬುರ್ಗಿ/ಗೌರಿ ಲಂಕೇಶ್‌,

ಬೆಂಗಳೂರು :  ಗೌರಿ ಲಂಕೇಶ್‌, ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಯ ಸಂಬಂಧ ತ್ವರಿತಗತಿಯ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ವಾಸುದೇವ್‌ ಭಗವಾನ್‌ ಸೂರ್ಯವಂಶಿ ಹಾಗೂ ಆರನೇ ಆರೋಪಿ ಅಮಿತ್‌ ಬಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ಅವರು, ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಈ ಸಂಬಂಧ ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರವಿದೆ. ಈ ಸಂಬಂಧ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಅವರ ಪ್ರಕರಣದಲ್ಲಿ 138 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ಹಂತದಲ್ಲಿ ಪೀಠವು, ಕಳೆದ ಮಾರ್ಚ್‌ನಲ್ಲಿ ಪ್ರಕರಣದಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ಹೇಳಿತ್ತು. ಈಗ ಜುಲೈ ಅಂತ್ಯ ಸಮೀಪಿಸುತ್ತಿದ್ದು, ಇದುವರೆಗೂ ವಿಶೇಷ ನ್ಯಾಯಾಲಯವೇಕೆ ಸ್ಥಾಪನೆಯಾಗಿಲ್ಲ? ಎಂದು ಪ್ರಶ್ನಿಸಿತು.

ಆಗ ಪ್ರಾಸಿಕ್ಯೂಷನ್‌ ಪರ ವಿಶೇಷ ಸರಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು “ಹೈಕೋರ್ಟ್‌ನಲ್ಲಿ ಸಂಬಂಧಿತರ ಜೊತೆ ಅಡ್ವೊಕೇಟ್‌ ಜನರಲ್‌ ಮಾತುಕತೆ ನಡೆಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಈ ವಿಚಾರದ ಬಗೆಗಿನ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು" ಎಂದರು.

ಈ ಸಂದರ್ಭದಲ್ಲಿ ಪೀಠ, ವಿಶೇಷ ನ್ಯಾಯಾಲಯ ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅಧಿಸೂಚನೆ ಹೊರಡಿಸಬೇಕು. ಸರಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ನಮಗೆ ಗೊತ್ತಿದೆ ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News